ಮೈಸೂರಿನ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನದ ವೈಭವ, ಸಮಯದ ವಿವರ ಇಲ್ಲಿದೆ
ಮೈಸೂರು, ಡಿಸೆಂಬರ್, 25: ಮಾಗಿ ಮಾಸದಲ್ಲಿ ಮೈಸೂರು ಅರಮನೆ ಆವರಣದಲ್ಲಿ ಆಯೋಜನೆಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಚಾಲನೆ ನೀಡಿದರು.
ಸುಮಾರು 25,000 ಬಗೆಯ ಅಲಂಕಾರಿಕ ಹೂವಿನ ಗಿಡ (ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸ್ವಿಲೋಷಿಯ, ನಸ್ಪರ್‌ಸಿಯಂ, ಆಂಟಿರೈನಂ, ಬೋನ್ಸಾತ್ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡ) ಹಾಗೂ ಗುಲಾಬಿ ಹೂವುಗಳು, ಕ್ರೈಸಾಂಥಿಯಮ್, ಪಿಂಗ್ ಪಾಂಗ್, ಕಾರ್ನೆಷನ, ಆಸ್ಪ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್‌ಘಿ, ಬ್ಲೂ ಡೈಸಿ, ಡ್ರೆಸಿನಾ ಸೇರಿ ನಾನಾ ಬಗೆಯ ಅಲಂಕಾರಿಕ ಹೂಗಳಿಂದ ಕಾಶಿ ವಿಶ್ವನಾಥ ದೇವಸ್ಥಾನ, ಜಯಚಾಮರಾಜ ಒಡೆಯರ್ ನೆನಪಿಗಾಗಿ ಕಳಶ, ಅಮರ್ ಜವಾನ್ ಯುದ್ಧ ಸ್ಮಾರಕಗಳನ್ನು ರೂಪಿಸಲಾಗಿದೆ.

ಹೂವಿನಲ್ಲಿ ಮೂಡಿದ ವಂದೇ ಭಾರತ್ ರೈಲು
ಹಾಕಿಪಟು ಧ್ಯಾನ್ ಚಂದ್, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ರಾಜವಂಶಸ್ಥ ಜಯಚಾಮರಾಜ ಒಡೆಯರ್ ಅವರ ಸರ್ ಎಂ. ವಿಶ್ವೇಶ್ವರಯ್ಯನವರು ಜೊತೆ ಕುಳಿತು ಸಂಭಾಷಣೆ ನಡೆಸುತ್ತಿರುವ ಮಾದರಿಯನ್ನೂ ಹೂವಿನಿಂದ ಅಲಂಕರಿಸಲಾಗಿದೆ. ಇತ್ತೀಚಿಗೆ ಮೃತಪಟ್ಟ ಗೋಪಾಲಸ್ವಾಮಿ ಆನೆ ಸ್ಮರಣೆಯನ್ನು ಮಾಡಲಾಗಿದೆ. ಪದ್ಮಶ್ರೀ ಭಗೀರಥಿ ಆಮೈ, ಚೋಟಾ ಭೀಮ್, ಮಾದರಿ ಚಿತ್ರಗಳು ಪ್ರದರ್ಶನದಲ್ಲಿವೆ. ಡಿಸೆಂಬರ್ 24ರಿಂದ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು, ಜನವರಿ 2ರವರೆಗೆ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗಿದೆ. ಸಂಜೆ 7ರಿಂದ 9ರವರೆಗೆ ಅರಮನೆಗೆ ವಿದ್ಯುತ್ ದೀಪಾಲಂಕಾರ ಇರುತ್ತದೆ.

ಕೋವಿಡ್ ನಿಯಮ ಪಾಲನೆ ಅಗತ್ಯ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಫಲಪುಷ್ಪ ಪ್ರದರ್ಶನದ ಮೂಲಕ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುವುದೇ ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕೊರೊನಾ ಬಗ್ಗೆ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ವರ್ಷದ ಅಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಆರೋಗ್ಯ ಇಲಾಖೆ ನೀಡುವ ನಿಯಮಗಳನ್ನು ಕಟ್ಟಿನಿಟ್ಟಾಗಿ ಪಾಲಿಸಲಾಗುವುದು ಎಂದರು.












Click it and Unblock the Notifications