Kabini Dam: ಕಬಿನಿ-ನುಗು ಜಲಾಶಯದಿಂದ ಭಾರಿ ನೀರು ಹೊರಕ್ಕೆ; ನಂಜನಗೂಡಿನಲ್ಲಿ ಪ್ರವಾಹ ಭೀತಿ
ಕೇರಳದ ವಯನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ನದಿಗೆ 70,000 ಕ್ಯುಸೆಕ್ ನೀರು ಬಿಡಲಾಗಿದ್ದು, ನಂಜನಗೂಡಿನಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಕಬಿನಿ ಜಲಾಶಯದ ಮುಂದಿನ ಸೇತುವೆ ಮುಳುಗಡೆ ಆಗಿದ್ದು, ಜಲಾಶಯದಿಂದ 70 ಸಾವಿರ ಕ್ಯುಸೆಕ್, ನುಗು ಅಣೆಕಟ್ಟೆಯಿಂದ 10 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಮಾದಾಪುರ-ಎನ್.ಬೆಳತ್ತೂರು ನಡುವೆ ಇರುವ ಸೇತುವೆ, ಹೊಮ್ಮರಗಳ್ಳಿ-ಸಂಗಮದ ಮಧ್ಯೆ ಇರುವ ಸೇತುವೆ ಮತ್ತು ಸುತ್ತೂರು ಸೇತುವೆ ಮುಳುಗಿವೆ.

ಕಪಿಲಾ ನದಿ ಪ್ರವಾಹದಿಂದಾಗಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸ್ನಾನಘಟ್ಟ, ಪರಶುರಾಮ ದೇವಾಲಯ, ಲಿಂಗಾಭಟ್ಟರ ಗುಡಿ ಹಾಗೂ ನದಿ ತೀರದ ಆಂಜನೇಯ ಸ್ವಾಮಿ ಗುಡಿಗಳು ನೀರಿನಲ್ಲಿ ಮುಳುಗಿವೆ. ಕಪಿಲಾ ನದಿ ತೀರದಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಲು ನಿರ್ಮಿಸಿರುವ ಕೆಳ ಸೇತುವೆಯೂ ಸಂಪೂರ್ಣ ಜಲಾವೃತಗೊಂಡಿದ್ದು, ದೇಗುಲದ ಭಕ್ತಿ ಮಾರ್ಗದ ಸಂಪರ್ಕ ಕಡಿತಗೊಂಡಿದೆ.
ಮನೆಗಳು ಜಲಾವೃತ
ನಗರದ ಹಳ್ಳದಕೇರಿಯಲ್ಲಿ ನಾಲ್ಕು ಮನೆಗಳು ಪ್ರವಾಹದಿಂದಾಗಿ ಸಂಪೂರ್ಣ ಜಲಾವೃತಗೊಂಡಿದ್ದು, ಉಳಿದಂತೆ ತಾಲೂಕಿನ ಬೊಕ್ಕಹಳ್ಳಿ, ಕುಳ್ಳಂಕನಹುಂಡಿ ಹಾಗೂ ಹುಲ್ಲಹಳ್ಳಿಯ ಗ್ರಾಮದ ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗುತ್ತಿದೆ. ತಾಲೂಕಿನ ಸಂಗಮ ಕ್ಷೇತ್ರದಲ್ಲಿರುವ ಮಹದೇವ ತಾತನವರ ಗದ್ದುಗೆ ಆವರಣವನ್ನು ಪ್ರವಾಹದ ನೀರು ಸುತ್ತುವರೆದಿದ್ದರೆ, ಮಲ್ಲನಮೂಲೆ ಮಠದ ಶ್ರೀ ಗುರು ಕಂಬಳೀಶ್ವರ ಗದ್ದುಗೆ ಜಲಾವೃತಗೊಂಡಿದೆ.
"ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯ ಜೀವಿ ವಲಯದ ಬಳ್ಳೆ ಹಾಡಿಯಲ್ಲಿರುವ ಅನೇಕ ಕುಟುಂಬಗಳಿಗೆ ಕಾಳಜಿ ಕೇಂದ್ರಕ್ಕೆ ಬರುವ ಮನವಿ ಮಾಡಲಾಗಿದೆ. ಕೆಲವರು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಬಳ್ಳೆ ಹಾಡಿಯಲ್ಲಿ ಸತತ ಮಳೆಗೆ 2 ಮನೆಗಳು ಬಿದ್ದಿದೆ. ತೊರವಳ್ಳಿ ಗ್ರಾಮದಲ್ಲಿ ಚೈತ್ರ ಎಂಬುವವರ ಮನೆ ಬಿದ್ದಿದೆ. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಲು ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಕಬಿನಿ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನಂಜನಗೂಡು ನಗರದ ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬರುವ ಮೈಸೂರು- ನಂಜನಗೂಡು ಮುಖ್ಯರಸ್ತೆ ಮಲ್ಲನಮೂಲೆ ಮಠದ ಸಮೀಪ ಜಲಾವೃತಗೊಂಡಿದೆ. ವಾಹನ ಸಂಚಾರಕ್ಕೆ ತೊಡಕಾಗುವ ಆತಂಕ ಎದುರಾಗಿದೆ.












Click it and Unblock the Notifications