ಮೈಸೂರಿನಲ್ಲಿ ಭ್ರೂಣಪತ್ತೆ ಪ್ರಕರಣ: 14 ಕ್ಲಿನಿಕ್‌ಗಳಿಗೆ ಬೀಗ
ಮೈಸೂರು, ಡಿಸೆಂಬರ್ 18: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಶುರು ಮಾಡಿದೆ. ಮೈಸೂರು ಜಿಲ್ಲೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ಇಲ್ಲದ 14 ಕ್ಲಿನಿಕ್‌ಗಳಿಗೆ ಬೀಗ ಜಡಿದಿದೆ.
ಪಿಸಿಪಿಎನ್‌ಡಿಟಿ ಕಾಯಿದೆ ಪಾಲನೆ ಮಾಡದ 80 ಸ್ಕ್ಯಾನಿಂಗ್ ಸೆಂಟರ್ ಹಾಗೂ ನಿಯಮ ಬಾಹಿರವಾಗಿ ಕೆಲಸ ಮಾಡುತ್ತಿರುವ 62 ರೇಡಿಯಾಲಜಿಸ್ಟ್‌ಗಳನ್ನು ಪತ್ತೆ ಹಚ್ಚಿದೆ. ಮಾತ್ರವಲ್ಲದೇ ಕೆಪಿಎಂಇ ಕಾಯಿದೆ ಉಲ್ಲಂಘಿಸಿರುವ 49 ಆಸ್ಪತ್ರೆಘಿ, ಕ್ಲಿನಿಕ್‌ಗಳಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ಚಾಟಿ ಬೀಸಿದೆ.

ಹೆಣ್ಣು ಭ್ರೂಣ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ಕೂಡಲೇ ವಿಶೇಷ ತಂಡ ರಚಿಸಿ ಜಿಲ್ಲೆಯಲ್ಲಿರುವ ಎಲ್ಲಾ ಆಸ್ಪತ್ರೆ, ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಕಾರ್ಯೋನ್ಮುಖವಾದ ಆರೋಗ್ಯ ಇಲಾಖೆ ಆರು ತಾಲೂಕು ಹಾಗೂ ನಗರ ವ್ಯಾಪ್ತಿಯ 9 ವಲಯಗಳಲ್ಲಿ ಒಟ್ಟು 15 ವಿಶೇಷ ತಂಡಗಳನ್ನು ರಚಿಸಿ ಪಿಸಿಪಿಎನ್‌ಡಿಟಿ ಹಾಗೂ ಕೆಪಿಎಂಇ ಕಾಯಿದೆ ಪಾಲನೆ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ಕೆಪಿಎಂಇ(ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ) ಪ್ರಕಾರ ಆಸ್ಪತ್ರೆ ಹಾಗೂ ಕ್ಲಿನಿಕ್ ನಡೆಸಲು ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು. ಸೂಕ್ತ ದಾಖಲೆ ಇಲ್ಲದ ಕ್ಲಿನಿಕ್‌ಗಳಿಗೆ ನೋಟಿಸ್ ಕಳುಹಿಸಲಾಗುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಟಾಸ್ಕ್‌ಪೋರ್ಸ್ ತಂಡ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಇದರಲ್ಲಿ 14 ಕ್ಲಿನಿಕ್‌ಗಳಿಗೆ ಬೀಗ ಹಾಕಿದ್ದುಘಿ, ಇಂತಹ ಇನ್ನು 4 ಕ್ಲಿನಿಕ್‌ಗಳನ್ನು ಪತ್ತೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಇವುಗಳನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮೈಸೂರು, ತಿ.ನರಸೀಪುರ, ನಂಜನಗೂಡು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಸಾಲಿಗ್ರಾಮ, ಸರಗೂರು ತಾಲೂಕಿನಲ್ಲಿ ಟಾಸ್ಕ್ ಪೋರ್ಸ್ ಕಾರ್ಯಾಚರಣೆ ಕೈಗೊಂಡಿದೆ. ಮೈಸೂರು ನಗರ ಪಾಲಿಕೆಯ 9 ವಲಯ ಕಚೇರಿ ಹಾಗೂ ಆಯಾ ತಾಲೂಕುಗಳಲ್ಲಿ ಕಾರ್ಯಾಚರಣೆ ಚುರುಕಿನಿಂದ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಸೂಚನೆ ನೀಡಿದಂತೆ ಈ ತಿಂಗಳಾಂತ್ಯದಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತೇವೆ ಎಂದರು.
ಆಸ್ಪತ್ರೆಗಳನ್ನು ಹೊರತುಪಡಿಸಿ ಸಣ್ಣ ಕ್ಲಿನಿಕ್ ನಡೆಸುವ ವೈದ್ಯರು ಬಿಎಎಂಎಸ್, ಬಿಎಡಿಎಸ್, ಬಿಯುಎಂಎಸ್ ಸರ್ಟಿಫಿಕೇಟ್ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಕೊಲ್ಕತ್ತಾ, ರಾಂಚಿ ಹಾಗೂ ದಿಲ್ಲಿಯ ವೈದ್ಯಕೀಯ ಸಂಸ್ಥೆಗಳಿಂದ ಪಡೆದಿರುವ ವೈದ್ಯಕೀಯ ಪ್ರಮಾಣ ಪತ್ರ ತೋರಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಮಾಹಿತಿ ಕಲೆ ಹಾಕಿದರೆ ಯಾವುದೇ ವಿವರ ಸಿಗುತ್ತಿಲ್ಲ. ಇದರಿಂದ ಇಂತಹ ವೈದ್ಯರು ಪಡೆದಿರುವ ವೈದ್ಯಕೀಯ ಪ್ರಮಾಣ ಪತ್ರಗಳ ಕಾನೂನು ಮಾನ್ಯತೆ ತಿಳಿಯುವುದೇ ನಮಗೆ ದೊಡ್ಡ ಸವಾಲಾಗಿದೆ ಎಂದು ಡಿಎಚ್‌ಎ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದ್ದಾರೆ.











Click it and Unblock the Notifications