ಮೈಸೂರಿನಲ್ಲಿ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಮೈಸೂರು, ಏಪ್ರಿಲ್ 03: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷ್ಯ ಮಾಡುತ್ತಾ ಆಡಳಿತ ಮಾಡುತ್ತಿವೆ. ಕೇಂದ್ರ ಸರ್ಕಾರ ವಿದ್ಯುತ್ ನೀತಿ ಜಾರಿಗೆ ತರಲು ಮುಂದಾಗಿದ್ದು, ಕೃಷಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಮಾಡಿ, ಮುಂದೆ ಸ್ಮಾರ್ಟ್ ಮೀಟರ್ ಅಳವಡಿಸುವ ಹುನ್ನಾರ ನಡೆಸಿದೆ ಎಂದು ರೈತರು ಆರೋಪಿಸಿದ್ದಾರೆ.
ವಿಜಯನಗರದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿ ಮುಂಭಾಗದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೈಸೂರು ತಾಲೂಕು ಘಟಕದ ವತಿಯಿಂದ ಶನಿವಾರ ಪ್ರತಿಭಟಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷ್ಯ ಮಾಡುತ್ತಾ ಆಡಳಿತ ಮಾಡುತ್ತಿವೆ. ಕೇಂದ್ರ ಸರ್ಕಾರ ವಿದ್ಯುತ್ ನೀತಿ ಜಾರಿಗೆ ತರಲು ಮುಂದಾಗಿದ್ದು, ಕೃಷಿ ಪಂಪ್‌ಸೆಟ್‌ಗೆ ಆಧಾರ್ ಅನ್ನು ಲಿಂಕ್ ಮಾಡಿ, ಮುಂದೆ ಸ್ಮಾರ್ಟ್ ಮೀಟರ್ ಅಳವಡಿಸುವ ಹುನ್ನಾರ ನಡೆಸಿದೆ. ಹೊಸ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ಲಕ್ಷಾಂತರ ರೂಪಾಯಿ ಹೊರೆ ಹೊರಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.
ರೈತರ ಪಂಪ್‌ಸೆಟ್‌ಗೆ ನೀಡುತ್ತಿರುವ ವಿದ್ಯುತ್ ಅನ್ನು ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ಪ್ರತಿ ದಿನ ಬೆಳಗಿನ ಸಮಯದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳುತ್ತಿರುವುದು ಸುಳ್ಳು. ಹಲವಾರು ಕಡೆ 4-5 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ. ವಿದ್ಯುತ್ ದರವನ್ನು ಆಗಿದ್ದಾಂಗೆ ಹೆಚ್ಚಿಸುತ್ತಿರುವುದು ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾಗುತ್ತಿದೆ.
ರಾಜ್ಯಾದ್ಯಂತ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಉಷ್ಣಾಂಶ ಅತಿ ಹೆಚ್ಚಿದ್ದು, ಕೃಷಿ ಪಂಪ್‌ಸೆಟ್ ಮೂಲಕ ವ್ಯವಸಾಯ ಮಾಡುವ ರೈತರಿಗೆ ವಿದ್ಯುತ್ ಸರಬರಾಜು ಸರಿಯಾದ ಸಮಯಕ್ಕೆ ಇಲ್ಲದಿರುವುದರಿಂದ ಹಲವಾರು ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ಸರ್ಕಾರ ತೀರ್ಮಾನಿಸಿದಂತೆ ಪಂಪ್‌ಸೆಟ್‌ಗಳಿಗೆ ಪ್ರತಿ ದಿನ ಹಗಲಿನ ವೇಳೆ ಕನಿಷ್ಟ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಟ್ರಾನ್ಸ್‌ಫರ್ಮಗಳು ಸುಟ್ಟು ಹೋದರೆ ನಿಗದಿತ ಕಾಲಾವಧಿಯೊಳಗೆ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸಬೇಕು. ತಾಂತ್ರಿಕ ತೊಂದರೆಗಳನ್ನು ಮುಂದಿಟ್ಟುಕೊಂಡು ವಿದ್ಯುತ್ ಸರಬರಾಜು ನಿಲ್ಲಿಸಬಾರದು. ರೈತರು ಹೊಸ ವಿದ್ಯುತ್ ಸಂಪರ್ಕ ಪಡೆಯಲು ಹಿಂದಿನ ರೀತಿಯೇ ಅಕ್ರಮ-ಸಕ್ರಮ ಜಾರಿಗೆ ತರಬೇಕು.
ಹೊಸ ಸಂಪರ್ಕ ಪಡೆದುಕೊಳ್ಳಲು ರೈತರೇ ಸ್ವಂತ ವೆಚ್ಚ ಭರಿಸಬೇಕೆಂಬ ನಿಯಮ ಕೈಬಿಟ್ಟು, ಹಳೇ ಪದ್ಧತಿ ಮುಂದುವರೆಸಬೇಕು. ಸ್ಮಾರ್ಟ್ ಮೀಟರ್ ಅವಳಡಿಕೆ ಯೋಜನೆ ಕೈಬಿಡಬೇಕು. ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವುದನ್ನು ಸ್ಥಗಿತಗೊಳಿಸಬೇಕು. ಗೃಹ ಬಳಕೆ ವಿದ್ಯುತ್ ಕನಿಷ್ಠ ದರ ಮತ್ತು ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಿ ಮಾತನಾಡಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್, ಸರ್ಕಾರದ ತೀರ್ಮಾನದಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿನಿತ್ಯ ಹಗಲಿನ ವೇಳೆ ಕನಿಷ್ಠ 7 ಗಂಟೆ ವಿದ್ಯುತ್ ಪೂರೈಕೆ ಮಾಡುವುದು ಹಾಗೂ ಟ್ರಾನ್ಸ್ಫಾರ್ಮರ್ಗಳು ಸುಟ್ಟು ಹೋದಲ್ಲಿ ನಿಗದಿತ ಅವಧಿಯೊಳಗೆ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಜಿಲ್ಲಾ ಕಾರ್ಯದರ್ಶಿ ನಾಗನಹಳ್ಳಿ ವಿಜೇಂದ್ರ, ಮೈಸೂರು ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಮುಖಂಡರಾದ ಮಂಡಕಳ್ಳಿ ಮಹೇಶ್, ಚಂದ್ರಶೇಖರ್, ಎ.ರಾಘವೇಂದ್ರ, ಬಸಪ್ಪನಾಯಕ್, ಮೈದನಹಳ್ಳಿ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.












Click it and Unblock the Notifications