ಇನ್ಮುಂದೆ ಕಬಿನಿಯ ಅತಿಥಿ ಭೋಗೇಶ್ವರ ಬರೀ ನೆನಪು ಮಾತ್ರ
ಮೈಸೂರು, ಜೂನ್ 12: ಸಾಮಾನ್ಯವಾಗಿ ಕಬಿನಿ ಜಲಾಶಯದ ಹಿನ್ನೀರು ನೋಡಲು ಹೋದ ಪ್ರವಾಸಿಗರು ಎಲ್ಲಾದರೂ ದೈತ್ಯಾಕಾರದ ಉದ್ದನೆಯ ದಂತದ ಕಬಿನಿ ರಾಜ ಎಂದೇ ಕರೆಯಲ್ಪಡುತ್ತಿದ್ದ ಭೋಗೇಶ್ವರ ಎಂಬ ಹಿರಿಯ ಗಜವನ್ನು ಕಣ್ಣಾರೆ ನೋಡಲು ಕಾಯುತ್ತಿದ್ದರು. ಆದರೆ ಇನ್ಮುಂದೆ ಆ ದೈತ್ಯಗಜ ಕಾಣುವುದಿಲ್ಲ. ಎರಡು ದಿನಗಳ ಹಿಂದೆ ಅದು ಕೊನೆಯುಸಿರೆಳೆದಿದ್ದು, ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಇದರ ಕಳೆಬರ ಪತ್ತೆಯಾಗಿದೆ. ಹೀಗಾಗಿ ಇನ್ನು ಮುಂದೆ ಭೋಗೇಶ್ವರ ಬರೀ ನೆನಪು ಮಾತ್ರ
ಎಚ್. ಡಿ. ಕೋಟೆ ಎಂದ ತಕ್ಷಣವೇ ಹತ್ತಾರು ಮದಗಜಗಳು ನಮ್ಮ ಕಣ್ಣಮುಂದೆ ಹಾದು ಹೋಗುತ್ತವೆ. ಮೈಸೂರು ದಸರಾಕ್ಕೆ ಮೆರಗು ಹೆಚ್ಚಿಸುವಲ್ಲಿ ಇಲ್ಲಿನ ನೂರಾರು ಆನೆಗಳು ಸಾಥ್ ನೀಡಿವೆ. ಜತೆಗೆ ಇಲ್ಲಿನ ಕಾಕನಕೋಟೆಯ ಆನೆಗಳ ಖೆಡ್ಡಾ ಇವತ್ತಿಗೂ ನಮ್ಮೆಲ್ಲರ ಮನದಲ್ಲಿ ಅಚ್ಚೊತ್ತಿದಂತೆ ಉಳಿದಿದೆ.
ಭೋಗೇಶ್ವರ ಕಳೆದ ಮೂರು ದಶಕಗಳಿಂದಲೂ ಕಬಿನಿ ಹಿನ್ನೀರಿನ ಸಫಾರಿ ವಲಯದಲ್ಲಿ ಸೆಲೆಬ್ರೆಟಿ ಆನೆಯಾಗಿ ಹೆಸರುಗಳಿಸಿದ್ದ. ಫೋಟೋಗ್ರಾಫರ್‌ಗಳಿಂದ ಅತಿ ಹೆಚ್ಚು ಫೋಟೋ ಕ್ಲಿಕ್ಕಿಸಿಕೊಂಡ ಆನೆ ಎಂಬ ಕೀರ್ತಿಯೂ ಕೂಡ ಭೋಗೇಶ್ವರನಿಗೆ ಸಲ್ಲುತ್ತದೆ.

ಪ್ರಾಣಿ ಪ್ರಿಯರ ಆಕರ್ಷಣೆ
ದಟ್ಟವಾದ ಅರಣ್ಯ ಅದರಾಚೆಗೆ ಹಿಂಡು ಹಿಂಡಾಗಿ ಓಡಾಡುವ ಕಾಡಾನೆಗಳು, ಹೇರಳ ಅರಣ್ಯ ಸಂಪತ್ತು, ನಿಸರ್ಗ ಸೌಂದರ್ಯದಿಂದ ಕಂಗೊಳಿಸುವ ಬೆಟ್ಟಗುಡ್ಡಗಳು, ಅದರೊಳಗೆ ಬದುಕು ಕಟ್ಟಿಕೊಂಡಿರುವ ಕಾಡಿನ ಮಕ್ಕಳು, ನಾಲ್ಕು ಜಲಾಶಯಗಳು, ಅದರಾಚೆಗಿನ ಹಿನ್ನೀರು ಹೀಗೆ ಹತ್ತಾರು ವಿಶೇಷಗಳೊಂದಿಗೆ ಹೆಚ್. ಡಿ. ಕೋಟೆ ಗಮನಸೆಳೆಯುತ್ತದೆ. ಇದರ ನಡುವೆಯೂ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಭೋಗೇಶ್ವರ ಆನೆ ಪ್ರವಾಸಿಗರ ಗಮನಸೆಳೆಯುತ್ತಿತ್ತು ಅಂದರೆ ಅದು ಇತರೆ ಆನೆಗಳಿಗಿಂತ ವಿಶಿಷ್ಟವಾಗಿತ್ತು ಅನ್ನೋದಂತು ಸತ್ಯ.
ಹಾಗೆನೋಡಿದರೆ ಎಚ್. ಡಿ. ಕೋಟೆಯ ಅರಣ್ಯ ಪ್ರದೇಶಗಳತ್ತ ಹೆಜ್ಜೆ ಹಾಕುವ ಪ್ರಾಣಿ ಪ್ರಿಯರು ಎರಡು ಪ್ರಾಣಿಗಳನ್ನು ನೋಡಲು ತವಕಿಸುತ್ತಿದ್ದರು. ಅದು ಯಾವುದೆಂದರೆ ಒಂದು ದೈತ್ಯಗಜ ಭೋಗೇಶ್ವರ ಮತ್ತೊಂದು ಕರಿಚಿರತೆ ಕಬೀರ. ನಾವು ದೈತ್ಯಗಜ ಬೋಗೇಶ್ವರನ ಬಗ್ಗೆ ತಿಳಿಯುತ್ತಾ ಹೋದರೆ ಅದು ತನ್ನ ಪಾಡಿಗೆ ತಾನು ಎಂಬಂತೆ ಕಬಿನಿ ಹಿನ್ನೀರು ಪ್ರದೇಶಗಳಲ್ಲಿ ಅಡ್ಡಾಡುತ್ತಾ ಜೀವಿಸುತ್ತಿದ್ದ ನಿರುಪದ್ರವಿ ಜೀವಿಯಾಗಿತ್ತು.

ದೈತ್ಯಾಕಾರ, ಉದ್ದನೆಯ ದಂತ ವಿಶೇಷತೆ
ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಹಿನ್ನೀರಿನಲ್ಲಿ ಪ್ರಾಣಿಗಳ ದಂಡುಗಳು ಕಂಡು ಬರುತ್ತವೆ. ಇವು ಎಲ್ಲ ದಿನಗಳಲ್ಲಿ ಕಾಣಲು ಅಸಾಧ್ಯ. ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಮಾತ್ರ ಕಂಡು ಬರುತ್ತದೆ. ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಡ್ಡಾಡುವುದರಿಂದ ಪ್ರತಿದಿನವೂ ಇಲ್ಲಿಗೆ ಬಾರದೆ ಯಾವತ್ತಾದರೊಮ್ಮೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸುತ್ತಿವೆ. ಸಾಮಾನ್ಯವಾಗಿ ನೀರು ಕುಡಿಯಲು ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತವೆ. ಆದರೆ ಭಾರೀ ಗಾತ್ರದ, ಉದ್ದದ ಕೋರೆಯ ಕಾಡಾನೆಯೊಂದು ಅಪರೂಪಕ್ಕೆ ಕಾಣಿಸಿಕೊಂಡು ಗಮನಸೆಳೆಯುತ್ತಿತ್ತು. ಅದೇ ಭೋಗೇಶ್ವರ.
ತನ್ನ ಪಾಡಿಗೆ ತಾನಾಯಿತು ಎಂಬಂತೆ ಅರಣ್ಯದಲ್ಲಿ ಸುತ್ತಾಡುತ್ತಾ ಆಗೊಮ್ಮೆ, ಈಗೊಮ್ಮೆ ಕಬಿನಿ ಹಿನ್ನೀರಿನಲ್ಲಿ ನೀರು ಕುಡಿದು ಅರಣ್ಯದತ್ತ ಹೆಜ್ಜೆ ಹಾಕುವ ಈ ಆನೆ ಹಲವರಿಗೆ ಕುತೂಹಲದ ಪ್ರಾಣಿಯಾಗಿ ಗಮನಸೆಳೆಯುತ್ತಿತ್ತು. ಕಾರಣ ಇದು ಎಲ್ಲ ಆನೆಗಳಂತೆ ಇರದೆ, ಒಂದಷ್ಟು ವಿಭಿನ್ನವಾಗಿಯೂ, ದೈತ್ಯಾಕಾರವಾಗಿಯೂ ಇತ್ತು. ಉದ್ದವಾದ ಅಪರೂಪದ ದಂತಗಳು ಭೂಷಣದಂತಿದ್ದವು.

ಪ್ರಾಣಿಪ್ರಿಯರಿಗೆ ಘಾಸಿ
ಸಾಮಾನ್ಯವಾಗಿ ಇತ್ತ ಕಡೆ ಬರುವ ಪ್ರವಾಸಿಗರು ತಮ್ಮ ಕ್ಯಾಮರಾಕ್ಕೆ ಭೋಗೇಶ್ವರ ಸಿಗುತ್ತಾನಾ ಎಂದು ಕುತೂಹಲದಿಂದ ಕಾಯುತ್ತಿದ್ದರು. ಒಂದು ವೇಳೆ ಸಿಕ್ಕರೆ ಅವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಅರಣ್ಯ ಇಲಾಖೆಗಳ ಮೂಲಗಳು ತಿಳಿಸುವಂತೆ ಈ ಆನೆಗೆ ಅಂದಾಜು 70ಕ್ಕೂ ಹೆಚ್ಚು ವರ್ಷ ವಯಸ್ಸಾಗಿತ್ತು. ಇದರ ದಂತ ಅಂದಾಜು 4 ಅಡಿ ಇತ್ತಲ್ಲದೆ, ದೈತ್ಯ ದೇಹದೊಂದಿಗೆ ಹಣೆಭಾಗ ಅಗಲವಾಗಿ, ಕಿವಿಯು ಮೊರದಗಲವಿತ್ತು.
ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗುವ ಈತನ ನಡಿಗೆಯಲ್ಲಿಯೂ ಗಾಂಭೀರ್ಯತೆಯಿತ್ತು. ನಾಡಿಗೆ ಬಂದು ಉಪಟಳ ಮಾಡಿದ ನಿದರ್ಶನವಿರಲಿಲ್ಲ. ಹಿಂಡಿನೊಂದಿಗೆ ಮೊದಲೆಲ್ಲಾ ಕಾಣಿಸಿಕೊಳ್ಳುತ್ತಿದ್ದಾದರೂ ಕ್ರಮೇಣ ಏಕಾಂಗಿಯಾಗಿ ಮೇವು ತಿನ್ನುತ್ತಾ, ನೀರು ಕುಡಿಯುತ್ತಾ ತನ್ನ ಪಾಡಿಗೆ ತಾನು ಎಂಬಂತೆ ಅರಣ್ಯದಲ್ಲಿ ಸಾಗುತ್ತಿತ್ತು. ಬಹುಶಃ ಇದು ವೃದ್ಧಾಪ್ಯದ ದಿನಗಳನ್ನು ಕಳೆಯುತ್ತಿದ್ದರಿಂದ ಹಾಗಿತ್ತೇನೋ? ಆದರೀಗ ಸಾವನ್ನಪ್ಪುವುದರೊಂದಿಗೆ ಪ್ರಾಣಿ ಪ್ರಿಯರ ಮನಸ್ಸಿಗೆ ಘಾಸಿಯಾಗಿದೆ.

ಮತ್ತೊಬ್ಬ ಭೋಗೆಶ್ವರ ಸಿಗುತ್ತಾ
ಅದು ಏನೇ ಇರಲಿ ಕಬಿನಿಯ ರಾಜನಾಗಿ ಮೆರೆದ ಭೋಗೇಶ್ವರನ ಕೀರ್ತಿಯನ್ನು ಮುಂದುವರೆಸಲು ಅಂತಹದೊಂದು ದೈತ್ಯಗಜ ಮತ್ತೊಂದು ಗಜ ಕಾಣಿಸಬಹುದಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ನಾವೆಲ್ಲರೂ ನೋಡಿದ ಮಟ್ಟಿಗೆ ಹೆಚ್. ಡಿ. ಕೋಟೆ ವ್ಯಾಪ್ತಿಯ ಅರಣ್ಯಗಳಲ್ಲಿ ದೈತ್ಯ ಗಾತ್ರದ ಗಜಗಳಿಗೇನು ಕೊರತೆಯಿಲ್ಲ. ಆದರೆ ಭೋಗೇಶ್ವರನಂತಿರುವ ಮತ್ತೊಂದು ಗಜ ಸಿಗುತ್ತಾ ಎನ್ನುವುದೇ ಪ್ರಶ್ನೆಯಾಗಿದೆ.












Click it and Unblock the Notifications