ಮೈಸೂರು: ಸ್ವಚ್ಛ ಸರ್ವೇಕ್ಷಣ್ ರಾಯಭಾರಿಯಾಗಿ ಬಹುಮುಖ ಪ್ರತಿಭೆ ಫಾಕಿಯಾ ಖಾನ್ ಆಯ್ಕೆ
ಮೈಸೂರು, ಆಗಸ್ಟ್ 19: ಮೈಸೂರು ನಗರದ ಬಹುಮುಖ ಪ್ರತಿಭೆ ಫಾಕಿಯಾ ಖಾನ್ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.
ಫಾಕಿಯಾ ಅವರನ್ನು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಸ್ವಚ್ಛ ಸರ್ವೇಕ್ಷಣೆ ಅಭಿಯಾನದ ಮೈಸೂರು ಜಿಲ್ಲೆ ರಾಯಭಾರಿಯಾಗಿ ಆಯ್ಕೆ ಮಾಡಲಾಯಿತು. ನೇಮಕ ಪತ್ರವನ್ನು ಅವರಿಗೆ ತಲುಪಿಸುವ ಕೆಲಸ ಬಾಕಿ ಇತ್ತು. ಸದ್ಯ ಅವರಿಗೆ ನೇಮಕ ಪತ್ರವನ್ನು ತಲುಪಿಸಲಾಗಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.

ಈಕೆ ಸಂತ ಜೋಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಧ್ಯಯನ ಮಾಡುತ್ತಿದ್ದಾರೆ. ಮಾರ್ಬಲ್, ಗ್ರಾನೈಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಅಜಾಜುಲ್ಲಾ ಖಾನ್ ಹಾಗೂ ಫಾರರಹೀನ್ ಖಾನ್ ದಂಪತಿಯ ಪುತ್ರಿ.
ಆಕಿಯಾ ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಗ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ತೆಗೆದುಕೊಂಡು ಉನ್ನತ ಮಟ್ಟದ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದಾರೆ. ರಾಷ್ಟ್ರಮಟ್ಟದ ಮಯಾ ಥಾಯ್ ಬಾಕ್ಸಿಂಗ್ ಪಟುವಾಗಿದ್ದು, ಬಾಕ್ಸಿಂಗ್ ಹಾಗೂ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅತಿ ಹೆಚ್ಚು ಸಾರ್ವಜನಿಕ ಭಾಷಣ ಮಾಡಿದ ಸಾಧನೆ ಇಂಡಿಯಾ ಬುಕ್ ಆ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
ಸಿಟಿಜನ್ ಫೀಡ್ ಬ್ಯಾಕ್ ಮುಖ್ಯ
ಮೈಸೂರು ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಸಿಟಿಜನ್ ಫೀಡ್ ಬ್ಯಾಕ್ ತುಂಬಾ ಮುಖ್ಯ. ನಗರದಲ್ಲಿ ನಡೆಯುವ ಸ್ವಚ್ಛತೆ ವಿಚಾರದಲ್ಲಿ ಸಾರ್ವಜನಿಕರು ಎಷ್ಟು ಪರಿಣಾಮಕಾರಿಯಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗುತ್ತದೆ. ಆಯಾ ಜಿಲ್ಲೆಯ ಜನಸಂಖ್ಯೆಯ ಶೇ. 10 ರಷ್ಟು ಜನರು ಸ್ವಚ್ಛತೆಗೆ ಸಂಬಂಧಿಸಿದ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದು ಮುಖ್ಯವಾಗಿದೆ. ಈ ವಿಷಯದಲ್ಲಿ ಮೈಸೂರು ಹಲವು ಬಾರಿ ಹಿನ್ನಡೆ ಕಂಡಿದೆ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆ ಈ ಬಾರಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಹೆಚ್ಚು ಒತ್ತು ನೀಡಿದೆ.
ಜುಲೈ ತಿಂಗಳಿಂದ ಸಿಟಿಜನ್ ಫೀಡ್ ಬ್ಯಾಕ್ ಪಡೆದುಕೊಳ್ಳುವ ಕಾರ್ಯ ಆರಂಭವಾಗಿದೆ. ಆದರೆ, ಆರಂಭದಲ್ಲಿ 20 ದಿನ ತಾಂತ್ರಿಕ ಕಾರಣಕ್ಕೆ ಫೀಡ್ ಬ್ಯಾಕ್ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ನಗರದಲ್ಲಿ 9.30 ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಶೇ.10ರಷ್ಟು ಎಂದರೆ 92,000 ಮಂದಿ ಪ್ರತಿಕ್ರಿಯಿಸಬೇಕಿದೆ. ಈವರೆಗೆ 42 ಸಾವಿರ ಮಂದಿ ಮಾತ್ರ ತಮ್ಮ ಫೀಡ್ ಬ್ಯಾಕ್ ನೀಡಿದ್ದಾರೆ. ಆಗಸ್ಟ್ 31ರಂದು ಸಾರ್ವಜನಿಕರು ಪ್ರತಿಕ್ರಿಯಿಸಲು ಕೊನೆಯ ದಿನಾಂಕವಾಗಿದೆ.
ಪ್ರತಿಕ್ರಿಯೆ ಹೇಗೆ..?
ಮನೆಗಳಿಗೆ ಬಂದು ಕಸ ಸಂಗ್ರಹಿಸುವುದು, ಕಸ ವಿಂಗಡಿಸಿ ನೀಡುವುದು, ಚರಂಡಿ ಸ್ವಚ್ಛತೆ, ಕಸ ಕಡಿಮೆ ಮಾಡುವ, ಪುನರ್ ಬಳಕೆ, ಉತ್ಪಾದನೆ ಮಾಡುವ ಬಗ್ಗೆ ತಿಳಿವಳಿಕೆ, ಸಾರ್ವಜನಿಕ ಶೌಚಗೃಹ, ಒಟ್ಟಾರೆ ನಗರದ ಸ್ವಚ್ಛತೆಗೆ ರೇಟಿಂಗ್ ನೀಡುವ ಕುರಿತು 9 ಪ್ರಶ್ನೆಗಳಿಗೆ ಕೇವಲ ಟಿಕ್ ಹಾಕುವ ಮುಖಾಂತರ ಉತ್ತರಿಸಬೇಕು. ಒಟ್ಟು 7 ಹಂತಗಳಲ್ಲಿ ಪ್ರಕ್ರಿಯೆ ನಡೆಸಬೇಕಿದೆ.












Click it and Unblock the Notifications