ಮತ್ತೊಮ್ಮೆ ಪೊಲೀಸರ ಸೋಗಿನಲ್ಲಿ ಮೈಸೂರಿನಲ್ಲಿ ಕಳ್ಳತನ
ಮೈಸೂರು, ಜನವರಿ 30: ಕಳೆದ ವಾರವಷ್ಟೇ ಪೊಲೀಸರ ಹೆಸರಿನಲ್ಲಿ ಮೋಸಗೈದ ಪ್ರಕರಣ ಮೈಸೂರಿನಲ್ಲಿ ಪತ್ತೆಯಾಗಿತ್ತು. ಆದರೆ ಮೋಸಗಾರರು ಮತ್ತೆ ಅದೇ ಚಾಳಿಯನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಹೌದು, ಖದೀಮರ ಗುಂಪೊಂದು ಪೊಲೀಸರ ಸೋಗಿನಲ್ಲಿ ಬಂದು ವ್ಯಾಪಾರಿಯೊಬ್ಬರನ್ನು ನಂಬಿಸಿ, ಅವರ ಬಳಿಯಿದ್ದ ವಾಚ್, ಚಿನ್ನದ ಚೈನ್ ಹಾಗೂ ಉಂಗುರವನ್ನು ಪಡೆದು ಪರಾರಿಯಾಗಿರುವ ಘಟನೆ ನಡೆದಿದೆ.
ಮೈಸೂರಿನ ಎಂ.ಜಿ ರಸ್ತೆಯ ಜೆ.ಎಸ್.ಎಸ್ ಆಸ್ಪತ್ರೆ ಬಳಿ ನಂಜನಗೂಡು ಮೂಲದ ಗೋಪಾಲ್ ಎಂಬುವವರೇ ಮೋಸ ಹೋದವರು. ಗೋಪಾಲ್ ರಸ್ತೆ ಬದಿಯಲ್ಲಿ ನಿಂತಿರುವಾಗ ನಕಲಿ ಪೊಲೀಸರು ಅವರ ಬಳಿ ಬಂದಿದ್ದಾರೆ. ಈ ವೇಳೆ, ಈ ಪ್ರದೇಶದ ಸುತ್ತಾಮುತ್ತ ವಂಚಕರ ಹಾವಳಿ ಹೆಚ್ಚಾಗಿದೆ. ನಾವು ಪೊಲೀಸ್ ಸ್ಕ್ವಾಡ್, ವಂಚಕರನ್ನು ಪತ್ತೆ ಮಾಡಲು ಬಂದಿದ್ದೇವೆ ಎಂದು ನಂಬಿಸಿದ್ದಾರೆ.
ನಂತರ ವ್ಯಾಪಾರಿಯ ಬಳಿ ನಿಮ್ಮ ಕೈಯಲ್ಲಿರೋ ವಾಚ್, ಕೊರಳಲ್ಲಿ ಇರುವ ಚಿನ್ನದ ಸರ ಹಾಗೂ ಉಗುರವನ್ನು ಬಿಚ್ಚಿ ಕಾರಿನಲ್ಲಿಡಿ ಎಂದು ಸೂಚಿಸಿದ್ದಾರೆ. ತದನಂತರ ವ್ಯಾಪಾರಿ ಬಳಿ ಇದ್ದ ಚಿನ್ನಾಭರಣವನ್ನು ಬಿಚ್ಚಿಸಿಕೊಂಡು ಕಾರಿನಲ್ಲಿ ಇಡುವ ರೀತಿ ನಾಟಕ ಮಾಡಿ, ಲಪಟಾಯಿಸಿ ಪರಾರಿಯಾಗಿದ್ದಾರೆ.

ವಂಚನೆ ಅರಿವಿಗೆ ಬಂದ ಬಳಿಕ ಮೋಸಹೋದ ವ್ಯಾಪಾರಿ ಪೊಲೀಸರ ಮೊರೆ ಹೋಗಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಮೈಸೂರಿನ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications