ಆದಿವಾಸಿಗಳ ಹಾಡಿಗೆ ಸುಪ್ರೀಂ ಕೋರ್ಟ್ ರಚಿಸಿರುವ ಸತ್ಯಶೋಧನಾ ಸಮಿತಿ ಭೇಟಿ, ಅಹವಾಲು ದಾಖಲು
ಮೈಸೂರು, ಜುಲೈ. 31: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ-2006ರ ಅನುಷ್ಟಾನದ ಪರಾಮರ್ಶೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಸತ್ಯ ಶೋಧನ ಸಮಿತಿಯು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊಳವಿಗೆ ಹಾಗೂ ಚಿಕ್ಕ ಹೆಜ್ಜೂರಿನ ಆದಿವಾಸಿಗಳ ಹಾಡಿಗಳಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿದೆ.
ಸತ್ಯ ಶೋಧನಾ ಸಮಿತಿಯ ಸದಸ್ಯರಾದ ಸುಪ್ರೀಂ ಕೋರ್ಟ್ ವಕೀಲ ರಿತ್ವಿಕ್‌ದತ್ತ, ಪರಿಸರ ತಜ್ಞ ವಿ.ಕೆ.ಬಹುಗುಣ ಹಾಗೂ ಸಂಜಯ್ ಕುಲಕರ್ಣಿ ಅವರು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಅನುಷ್ಟಾನಗೊಳಿಸಿರುವ ಬಗೆ ಆದಿವಾಸಿಗಳಿಂದ ಹಾಗೂ ಡೀಡ್ ಕಚೇರಿಯಲ್ಲಿ ಅರಣ್ಯ ಹಕ್ಕು ಸಮಿತಿಗಳ ಪದಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಸತ್ಯ ಶೋಧನಾ ತಂಡದ ಮುಂದೆ ತಮ್ಮ ಅಹವಾಲು ಸಲ್ಲಿಸಿರುವ ಅರಣ್ಯ ಹಕ್ಕು ಸಮಿತಿ ಸದಸ್ಯರಾದ ಶಿವಣ್ಣ, ಪಿ.ಕೆ.ರಾಮು, ನಾಗೇಶ್, "2008- 10ರಲ್ಲಿ ವೈಯಕ್ತಿಕ ಹಕ್ಕುಗಳಿಗಾಗಿ ನಿಯಮಾನುಸಾರ ಸಲ್ಲಿಸಿದ್ದ ಅರ್ಜಿಗಳನ್ನು ವನ್ಯಜೀವಿ ಅರಣ್ಯ ಪ್ರದೇಶಗಳೆಂದು ನೆಪಹೇಳಿ ತಿರಸ್ಕರಿಸಲಾಗಿದೆ. ಸಾಮೂಹಿಕ ಹಕ್ಕಿನ ಅರ್ಜಿಗಳನ್ನೂ ವಿಲೆ ಮಾಡದೇ ಇಟ್ಟುಕೊಳ್ಳಲಾಗಿದೆ. 1972ರ ವನ್ಯಜೀವಿ ಕಾಯ್ದೆಯಿಂದ ನಾವು ಕಾಡಿನಿಂದ ಹೊರಹಾಕಲ್ಪಟ್ಟು ಕಳೆದ 50 ವರ್ಷಗಳಿಂದ ಸಂಕಷ್ಟದ ಬದುಕನ್ನು ಬದುಕುತ್ತಿದ್ದೇವೆ ಎಂದು ಸತ್ಯ ಶೋಧನಾ ತಂಡಕ್ಕೆ ತಿಳಿಸಿದ್ದಾರೆ.
33 ಹಾಡಿಗಳಿಗೆ ಅನ್ಯಾಯ
ಹುಣಸೂರು ತಾಲೂಕಿನಲ್ಲಿ ಮೊದಲ ಹಂತದಲ್ಲಿ ಸಲ್ಲಿಸಿದ್ದ 1311 ವೈಯಕ್ತಿಕ ಅರಣ್ಯ ಹಕ್ಕು ಅರ್ಜಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಕಾಡಿನಿಂದ ಹೊರಹಾಕಲ್ಪಟ್ಟ 33 ಹಾಡಿಗಳಿಗೂ ಅನ್ಯಾಯ ಮಾಡಲಾಗಿದೆ. ಸಲ್ಲಿಸಿರುವ 31 ಸಾಮೂಹಿಕ ಅರಣ್ಯ ಹಕ್ಕು ಪ್ರಸ್ತಾವಗಳ ಪೈಕಿ ಕೇವಲ 3ರನ್ನು ಮಾತ್ರ ಪರಿಗಣಿಸಿ ಉಳಿದ 29 ಪ್ರಸ್ತಾವಗಳನ್ನು ಜಿಲ್ಲಾ ಅರಣ್ಯ ಹಕ್ಕು, ಸಮಿತಿಯ ಮಟ್ಟದಲ್ಲಿ ವಿಲೇ ಇಡಲಾಗಿದೆ. ಜನರಿಗೆ ಅರಣ್ಯ ಕಿರು ಸಂಪನ್ಮೂಲಗಳನ್ನು ಸಂಗ್ರಹಿಸದಂತೆ ತಡೆಯುತ್ತಿದ್ದಾರೆ ಎಂದು ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್ ಮಾಹಿತಿ ನೀಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ 38 ಹಾಡಿಗಳಿಂದ 987 ವೈಯಕ್ತಿಕ ಅರಣ್ಯ ಭೂಮಿ ಹಕ್ಕುಗಳಿಗೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ 115 ಕುಟುಂಬಗಳಿಗೆ ಮಾತ್ರ 10ಗುಂಟೆ, 5 ಗುಂಟೆ ಹಕ್ಕುಪತ್ರ ನೀಡಿ ಅನ್ಯಾಯ ಮಾಡಲಾಗಿದೆ. 18 ಹಾಡಿಗಳಿಗೆ ಸಾಮೂಹಿಕ ಹಕ್ಕುಪತ್ರ ನೀಡಿದ್ದರೂ ಮನೆಗಳನ್ನು ಕಟ್ಟಲು ಬಿಡದೆ, ಕೃಷಿ ಭೂಮಿಯಲ್ಲಿ ಕೃಷಿ ಮಾಡಲು ಬಿಡದೆ ಕಾಡು ಪ್ರವೇಶಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ರಾಣಿಗೇಟ್ ಹಾಡಿಯ ಜೆ.ಡಿ.ಜಯಪ್ಪ ಆರೋಪಿಸಿದ್ದಾರೆ.
ಇದರ ಜೊತೆಗೆ ಎಚ್.ಡಿ.ಕೋಟೆ ತಾಲೂಕಿನ ಆನೆಮಾಳ ಮತ್ತು ಮಾಳದ ಹಾಡಿಯಲ್ಲಿಯೂ ವೈಯಕ್ತಿಕ ಹಕ್ಕು ಪತ್ರಗಳನ್ನು ಕೊಟ್ಟಿದ್ದರೂ ಕೇವಲ 4 ರಿಂದ 5 ಗುಂಟೆ ಭೂಮಿಯನ್ನು ಗುಡಿಸಲು ಸುತ್ತ ಮಾತ್ರ ದಾಖಲಿಸಿ ಹಕ್ಕುಪತ್ರ ನೀಡಿ ಅನ್ಯಾಯ ಮಾಡಲಾಗಿದೆ. ಸಾಮೂಹಿಕ ಹಕ್ಕು ಮಾನ್ಯ ಮಾಡದೆ ಅನ್ಯಾಯ ಮಾಡಲಾಗಿದೆ ಂಬ ದೂರು ಕೇಳಿ ಬಂದಿದೆ.
ಹಾಡಿಗಳ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಸತ್ಯ ಶೋಧನಾ ಸಮಿತಿಯ ಸದಸ್ಯರು, "2500 ಆದಿವಾಸಿ ಕುಟುಂಬಗಳ ಹಕ್ಕುಗಳನ್ನು ಗೌರವಿಸುವುದು ಅವರಿಗೆ ಅರಣ್ಯ ಹಕ್ಕು ಮಾನ್ಯ ಮಾಡುವುದು, ಗುಣಮಟ್ಟದ ಬದುಕಿಗೆ ಅವಕಾಶ ಮಾಡುವುದು ಅತಿ ಜರೂರಾಗಿ ಆಗಬೇಕಾದ ಕೆಲಸ ಎಂದು ತಿಳಿಸಿ, ಎಲ್ಲ ಮಾಹಿತಿಗಳನ್ನು ಸತ್ಯ ಶೋಧನಾ ಸಮಿತಿ ಕಚೇರಿಗೆ ಸಲ್ಲಿಸಬೇಕು" ಎಂದು ಸೂಚಿಸಿದ್ದಾರೆ.
ಸತ್ಯ ಶೋಧನಾ ಸಮಿತಿ ಭೇಟಿ ವೇಳೆ ವಿಧಾನ ಪರಿಷತ್ ಸದಸ್ಯ ಸೀತರಾಮ್‌ಸಿದ್ದಿ, ವನವಾಸಿ ಕಲ್ಯಾಣದ ನಾಯಕ ಗಿರೀಶ್ ಕುಬೇರ್, ವನವಾಸಿ ಕಲ್ಯಾಣದ ಸಂಯೋಜಕ ಶ್ರೀನಿವಾಸ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು, ಅರಣ್ಯ ಅಧಿಕಾರಿಗಳು, ಆದಿವಾಸಿ ಮುಖಂಡರು ಹಾಜರಿದ್ದು, ತಮ್ಮ ಅಹವಾಲು ಸಲ್ಲಿಸಿದ್ದಾರೆ.












Click it and Unblock the Notifications