ಸಿದ್ದರಾಮಯ್ಯ ಸರ್ಕಾರದ ಭಾಗ್ಯಗಳು ಜನರಿಗೆ ತಲುಪಿಲ್ಲ: ಎಚ್.ಡಿ.ಕುಮಾರಸ್ವಾಮಿ ಆರೋಪ
ಹಿಂದುಳಿದವರು, ದಲಿತರಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿರುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಆ ಹಣ ದಲಿತರ ಕಲ್ಯಾಣಕ್ಕೆ ದೊರೆತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಮೈಸೂರು, ಮಾರ್ಚ್, 03: ಹಿಂದುಳಿದವರು, ದಲಿತರಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿರುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಆ ಹಣ ದಲಿತರ ಕಲ್ಯಾಣಕ್ಕೆ ದೊರೆತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗ್ಯಗಳನ್ನು ನೀಡಿದೆ ಎಂದು ದೊಡ್ಡದಾಗಿ ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ಆ ಭಾಗ್ಯಗಳು ಜನರಿಗೆ ತಲುಪಿದೆಯೇ ಎಂಬುದನ್ನು ಗ್ರಾಮೀಣ ಭಾಗಕ್ಕೆ ತೆರಳಿ ಪರೀಕ್ಷೆ ಮಾಡಬೇಕು. ಆಗ ನಿಜ ಗೊತ್ತಾಗುತ್ತದೆ ಎಂದರು.

ವೈಯಕ್ತಿಕವಾಗಿ ಹಣ ನೀಡಿದ್ದೇನೆ
ದಿನ ಬೆಳಗಾದರೆ ಅಧಿಕಾರಿಗಳು ಯೋಜನೆಯ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ನಾನಾ ಯೋಜನೆಗಳ ಲಾನುಭವಿಗಳು ನಮ್ಮ ಮನೆ ಬಳಿಗೆ ಬಂದು ಹೇಳುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಹಣ ನೀಡಿ ಪೆಟ್ಟಿಗೆ ಅಂಗಡಿ ಹಾಕಿಕೊಳ್ಳುವುದು ಸೇರಿದಂತೆ ಇನ್ನಿತರ ಕಾರ್ಯಕ್ಕೆ ಸ್ಪಂದಿಸಿದ್ದೇನೆ ಎಂದು ತಿಳಿಸಿದರು.
ಈ ಬಾರಿಯ ಸೋಲು ಮೂರು ಪಕ್ಷಗಳಿಗೂ ದೊಡ್ಡ ಹಿನ್ನಡೆಯನ್ನು ತಂದು ಕೊಡಲಿದೆ. ಬಿಜೆಪಿಯ ಧರ್ಮದ ರಾಜಕೀಯ ಈ ಬಾರಿ ನಡೆಯುವುದಿಲ್ಲ ಎಂದರು.
ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ
ಕಳೆದ ಬಾರಿಯಂತೆ ಯುವ ಸಮೂಹ ಈ ಬಾರಿ ಬಿಜೆಪಿಯಿಂದ ವಿಮುಖವಾಗಿದೆ. ಕಾಂಗ್ರೆಸ್ ನನ್ನ ವರ್ಚಸ್ಸನ್ನು ಹಾಳು ಮಾಡಬೇಕೆಂದು ಸದಾ ಪ್ರಯತ್ನಿಸುತ್ತಿದೆ. ಹಾಗೆಯೇ ಸಾಲಮನ್ನಾ ಮಾಡುವ ನಿರ್ಧಾರವನ್ನು ಕೈ ಬಿಡುವಂತೆ ಕಾಂಗ್ರೆಸ್‌ನವರೇ ನನ್ನ ಮೇಲೆ ಸಿಎಂ ಆಗಿದ್ದಾಗ ಒತ್ತಡ ಹೇರಿದ್ದರು. ಈಗ ಸಿದ್ದರಾಮಯ್ಯ ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಹಳ್ಳಿ ಕಡೆ ಕಾಲು ಮುರುಕ ಕುದುರೆ ಕೊಟ್ಟು ಏರು ಎನ್ನುವವನನ್ನು ಮನೆ ಮುರುಕ ಅನ್ನುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್, ಬಿಜೆಪಿ ನಾಯಕರಿಂದ ಅಪಪ್ರಚಾರ
ಜೆಡಿಎಸ್‌ಗೆ ಮತ ಹಾಕಬೇಡಿ. ಕೇವಲ 10ರಿಂದ 15 ಸ್ಥಾನಗಳಲ್ಲಿ ಮಾತ್ರ ಜಯಿಸುತ್ತದೆ. ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ಪಂಚರತ್ನ ಯಾತ್ರೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ನಾಡಿ ಮಿಡಿತ ಅರಿತ್ತಿದ್ದೇನೆ. ಸಾಕಷ್ಟು ನಾಯಕರು ಪಕ್ಷ ಬಲಗೊಳ್ಳುತ್ತಿರುವುದನ್ನು ಕಂಡು ಜೆಡಿಎಸ್‌ಗೆ ಸೇರುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ.ಮಹೇಶ್, ಕೆ. ಮಹದೇವ್, ಎಂ. ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸದಸ್ಯ ರಮೇಶ್‌ಗೌಡ, ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್, ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚಲುವೇಗೌಡ, ಮಾಜಿ ಮೇಯರ್‌ಗಳಾದ ಆರ್. ಲಿಂಗಪ್ಪ, ಎಂ.ಜೆ.ರವಿಕುಮಾರ್, ಮಾಜಿ ಉಪ ಮೇಯರ್ ಕೃಷ್ಣ, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಉಪಾಧ್ಯಕ್ಷರಾದ ಅನುರಾಗ್ ಬಸವರಾಜ್, ಧರ್ಮಾಪುರ ನಾರಾಯಣ್, ಎಂ. ಸುಬಹ್ರಣ್ಯ, ರಂಗಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications