Mysuru Dasara: ವ್ಯಾಪಾರ ವಿಸ್ತರಣೆ ಮಾಡಲು ಮೈಸೂರು ದಸರಾದಲ್ಲಿ ಸದಾವಕಾಶ
ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ದಿನಗಣನೆ ಶುರುವಾಗಿದೆ. ಇನ್ನೊಂದು ತಿಂಗಳು ಮಾತ್ರ ಸಮಯ ಇದ್ದು, ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ದಸರಾ ವೀಕ್ಷಣೆಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ತಮ್ಮ ವ್ಯಾಪಾರ, ವ್ಯವಹಾರಗಳನ್ನು ವಿಸ್ತರಣೆ ಮಾಡಲು ವ್ಯಾಪಾರಿಗಳಿಗೆ ಅವಕಾಶವಿದ್ದು, ಬಳಸಿಕೊಳ್ಳುವಂತೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ ಹೇಳಿದರು
ನಗರದ ಲಲಿತ ಮಹಲ್ ಪ್ಯಾಲೇಸ್‌ನಲ್ಲಿ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ತಮ್ಮ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳುವ ಸದಾವಕಾಶವನ್ನು ಸದುಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.

ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದ ಸಾವಿರಾರು ಜನ ಆಗಮಿಸುತ್ತಿದ್ದು, ವ್ಯಾಪಾರಿಗಳು ತಮ್ಮ ಉತ್ಪನ್ನಗಳ, ಕಂಪನಿ, ಕೈಗಾರಿಕೆಗಳನ್ನು, ಜನರ ಬಳಿ ಕೊಂಡೊಯ್ಯಲು ಇದು ಉತ್ತಮ ಅವಕಾಶವಾಗಿದ್ದು ಉಪಯೋಗಿಸಿಕೊಳ್ಳಿ ಎಂದರು.
ಸ್ವಯಂಪ್ರೇರಿತವಾಗಿ ಮುಂದೆ ಬನ್ನಿ
ಪ್ರಾಯೋಜಕತ್ವದಲ್ಲಿ ಜಂಬೂಸವಾರಿ, ಅಂಬಾರಿ, ಪ್ಲಾಟಿನಂ, ಗೋಲ್ಡನ್, ಸಿಲ್ವರ್ ಎಂಬ ವಿಧಗಳಿದ್ದು ಯಾವುದು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಾವಕಾಶದ ಅವಕಾಶಗಳಿದ್ದು ಬಳಸಿಕೊಳ್ಳಿ, ಇದರಲ್ಲಿ ಯಾವುದೇ ಒತ್ತಾಯವಲ್ಲ, ಸ್ವಯಂಪ್ರೇರಿತವಾಗಿ ಮುಂದೆ ಬರಬಹುದು ಎಂದರು.
ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ, ಅಂದು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ವ್ಯಾಪಾರಿಗಳು, ಉದ್ಯಮಿಗಳು ಈ ಮೊದಲೂ ಸಂಪೂರ್ಣ ಸಹಕಾರ ನೀಡಿದ್ದೀರಿ, ಈ ಬಾರಿಯೂ ನಿಮ್ಮಿಂದ ಸಹಕಾರ ಬಯಸುತ್ತೇವೆ. ನಿಮಗೆ ಅನುಕೂಲವಾಗುವಂತಹ ಪ್ರಾಯೋಜಕತ್ವವನ್ನು ಪಡೆಯಬಹುದು, ತಕ್ಷಣಕ್ಕೆ ತಿಳಿಸಲಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಮಾಹಿತಿ ನೀಡಬಹುದು ಎಂದರು.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತ ಮಾತನಾಡಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳಲ್ಲಿ, ಪ್ರವೇಶ ದ್ವಾರಗಳಲ್ಲಿ, ವಿವಿಧ ಸ್ಟಾಲ್ ಗಳಲ್ಲಿ ಹಾಗೂ ಯುವ ದಸರಾ, ಯುವ ಸಂಭ್ರಮ, ಆಹಾರ ಮೇಳ, ಹೂವಿನ ಪ್ರದರ್ಶನ, ಕುಸ್ತಿ ಇನ್ನು ಮುಂತಾದ ವೇದಿಕೆಗಳಲ್ಲಿ ತಮ್ಮ ಜಾಹೀರಾತುಗಳನ್ನು ಹಾಕಲು ಅವಕಾಶ ಕೊಡುತ್ತೇವೆ ಎಂದರು.
ಜಂಬೂ ಸವಾರಿ ಪ್ರಾಯೋಜಕತ್ವದಲ್ಲಿ ₹2 ಕೋಟಿ, ಅಂಬಾರಿ ಪ್ರಾಯೋಜಕತ್ವದಲ್ಲಿ ₹1 ಕೋಟಿ, ಪ್ಲಾಟಿನಂ ಪ್ರಾಯೋಜಕತ್ವದಲ್ಲಿ ₹75 ಲಕ್ಷ, ಗೋಲ್ಡನ್ ಪ್ರಾಯೋಜಕತ್ವದಲ್ಲಿ ₹50 ಲಕ್ಷ, ಸಿಲ್ವರ್ ಪ್ರಾಯೋಜಕತ್ವದಲ್ಲಿ ₹25 ಲಕ್ಷ ಪ್ರಾಯೋಜಕತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications