"ಎಂವಿಎಂ"ಗಳಾಗಿ ಬದಲಾದ ಇವಿಎಂಗಳು; ಕೆಪಿಸಿಸಿ ವಕ್ತಾರರ ಆರೋಪ
ಮೈಸೂರು, ನವೆಂಬರ್ 17: ಎಲೆಕ್ಟ್ರಾನಿಕ್ ಮತ ಯಂತ್ರಗಳೆಲ್ಲ ಈಗ ಮೋದಿ ಮತ ಯಂತ್ರಗಳಾಗಿ ಪರಿವರ್ತನೆಯಾಗಿವೆ. ಇವು ಇವಿಎಂ ಅಲ್ಲ, ಎಂವಿಎಂ ಆಗಿವೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲ. ಚುನಾವಣೆಗಳನ್ನು ನಡೆಸುವುದಾದರೆ ಬ್ಯಾಲಟ್ ಪೇಪರ್ ಗಳನ್ನು ಬಳಸಿ ಚುನಾವಣೆ ನಡೆಸಿ ಎಂದು ಚುನಾವಣೆ ಆಯೋಗವನ್ನು ಒತ್ತಾಯಿಸಿದರು.
ಬಿಹಾರದಲ್ಲಿ ಮಹಾಘಟಬಂಧನ್ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲುತ್ತವೆ ಎಂದು ಎಲ್ಲಾ ಸಮೀಕ್ಷೆಗಳು ವರದಿ ಮಾಡಿದ್ದವು. ಸಮೀಕ್ಷೆಗಳೆಲ್ಲಾ ಉಲ್ಟಾ ಹೊಡೆದಿವೆ. ಅಂದರೇನರ್ಥ? ಬಿಜೆಪಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಶಿರಾ ಹಾಗೂ ಆರ್ ಆರ್ ನಗರದಲ್ಲಿ ಬಳಸಲಾದ ಇವಿಎಂಗಳನ್ನು ಯಾವ ರಾಜ್ಯದಿಂದ ತರಿಸಲಾಗಿತ್ತು ಎಂದು ಪ್ರಶ್ನಿಸಿದ ಅವರು, ಇವಿಎಂ ಅನ್ನು ಬಿಜೆಪಿ ಅಧಿಕಾರ ನಡೆಸುವ ರಾಜ್ಯಗಳಿಂದ ತರಿಸಲಾಗಿತ್ತು. ಅಮೇರಿಕಾದಂತಹ ರಾಷ್ಟ್ರವೇ ಬ್ಯಾಲಟ್ ಪೇಪರ್ ಗಳ ಮೂಲಕ ಚುನಾವಣೆ ನಡೆಸುತ್ತದೆ. ನಾವು ಇವಿಎಂ ವಿರುದ್ಧವಾಗಿದ್ದೇವೆ. ಅದನ್ನು ಬ್ಯಾನ್ ಮಾಡಬೇಕು. ಮುಂದಿನ ದಿನಗಳಲ್ಲಿ ಇವಿಎಂ ವಿರುದ್ಧ ದೊಡ್ಡ ಜನಾಂದೋಲನವನ್ನೇ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನಗಳ ಅಭಿಪ್ರಾಯ ಸಂಗ್ರಹಿಸದೇ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಯೂನಿಟ್ ಗೆ 40 ಪೈಸೆ ಜಾಸ್ತಿ ಮಾಡಿದೆ. ಇದರಿಂದ ಪ್ರತಿ ಬಡ ಕುಟುಂಬಕ್ಕೆ 80 ರೂಪಾಯಿ ಹೊರೆಯಾಗುತ್ತದೆ. ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೂ ಬುದ್ಧಿ ಕಲಿತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications