ಮೈಸೂರಿನ 75 ಪಾರಂಪರಿಕ ಕಟ್ಟಡಗಳಿಗೆ ಬೇಕಿದೆ ತುರ್ತು ನವೀಕರಣ: ಪಾರಂಪರಿಕ ಸಂರಕ್ಷಣಾ ಸಮಿತಿ ವರದಿ
ಮೈಸೂರು, ಸೆಪ್ಟೆಂಬರ್, 15: ಮೈಸೂರು ಜಿಲ್ಲೆಯ ಪಾರಂಪರಿಕ ಸಂರಕ್ಷಣಾ ಸಮಿತಿ ನಡೆಸುತ್ತಿರುವ 131 ಕಟ್ಟಡಗಳ ಸರ್ವೆ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, 75 ಕಟ್ಟಡಗಳಿಗೆ ತುರ್ತು ರಿಪೇರಿ ಬೇಕಾಗಿದೆ ಎಂದು ವರದಿ ಸಿದ್ಧಪಡಿಸುತ್ತಿದೆ.
ನಗರದಲ್ಲಿ 234 ಪಾರಂಪರಿಕ ಕಟ್ಟಡಗಳಿವೆ. 100ಕ್ಕೂ ಹೆಚ್ಚು ಕಟ್ಟಡಗಳಿಗೆ 100 ವರ್ಷ ತುಂಬಿದೆ. 131 ಕಟ್ಟಡಗಳಿಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ. ಇದರಲ್ಲಿ 75 ಕಟ್ಟಡಗಳಿಗೆ ತುರ್ತು ದುರಸ್ತಿ ಅವಶ್ಯಕತೆ ಇದೆ. ತಕ್ಷಣಕ್ಕೆ 25 ಕಟ್ಟಡಗಳನ್ನು ದುರಸ್ತಿಗೊಳಿಸಬೇಕಿದೆ. ವಿವಿಧ ಇಲಾಖೆ ಹಾಗೂ ಸಾರ್ವಜನಿಕ ಬಳಕೆಯಲ್ಲಿರುವ ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆ ಪ್ರತಿ ತಿಂಗಳು ಇಂತಿಷ್ಟು ಅನುದಾನ ಅಗತ್ಯ. ಆದರೆ, ಅನುದಾನ ಕೊರತೆಯಿಂದಾಗಿ ಕಟ್ಟಡಗಳ ನಿರ್ವಹಣೆ ವಹಿಸಿಕೊಳ್ಳಲು ಸ್ಥಳೀಯ ಸಂಸ್ಥೆಯಾಗಲಿ ಅಥವಾ ಇತರೆ ಇಲಾಖೆಯಾಗಲಿ ಮುಂದಾಗುತ್ತಿಲ್ಲ.

ಮೈಸೂರು ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ನವೀಕರಣ ಮಾಡಬೇಕೆ ಅಥವಾ ಪುನರ್ ನಿರ್ಮಿಸಬೇಕೆ ಎಂಬ ಗೊಂದಲದಲ್ಲೇ ಹಲವಾರು ಕಟ್ಟಡಗಳು ಪಾಳು ಬಿದ್ದಿವೆ. ನಗರ ಪಾಲಿಕೆ ವ್ಯಾಪ್ತಿಗೆ ಬರುವ 75 ಕಟ್ಟಡಗಳಿಗೆ ತುರ್ತು ದುರಸ್ತಿ ಕಾರ್ಯ ಆಗಬೇಕಿದೆ ಎಂದು ಮೈಸೂರು ಜಿಲ್ಲೆಯ ಪಾರಂಪರಿಕ ಸಂರಕ್ಷಣಾ ಸಮಿತಿ ಅಭಿಪ್ರಾಯಪಟ್ಟಿದ್ದು, ಅಂತಿಮ ವರದಿ ಸಿದ್ಧಪಡಿಸುತ್ತಿದೆ. 6 ತಿಂಗಳಿನಿಂದ ಈ ಸಮಿತಿ ಸರ್ವೆ ಕಾರ್ಯ ನಡೆಸುತ್ತಿದ್ದು, ವರದಿ ಪೂರ್ಣಗೊಂಡ ಬಳಿಕ ಡಿಸಿಗೆ ಸಲ್ಲಿಕೆ ಮಾಡಲಿದೆ.
ಈ ವೇಳೆ ಪಾರಂಪರಿಕ ಇಲಾಖೆ ಉಪ ಆಯುಕ್ತರಾದ ಮಂಜುಳಾ, ಪ್ರೊ.ಎನ್.ಎಸ್.ರಂಗರಾಜು, ವಿಶ್ರಾಂತ ವಿಟಿಯು ಡೀನ್ ಸೈಯದ್ ಶಕೀಬ್ ಉರ್ ರೆಹಮಾನ್, ಪ್ರೊ.ಶರಶ್ಚಂದ್ರ, ಎಂಸಿಸಿ ಟೌನ್ ಪ್ಲ್ಯಾನಿಂಗ್ ಸೆಕ್ಷನ್ ಎಂಜಿನಿಯರ್ ಪವಿತ್ರ, ರಮ್ಯಾ, ರಘು ಹಾಗೂ ಸೌಮ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications