Mysuru: ಅರಮನೆ ಆವರಣದಿಂದ ಹೊರ ಬಂದು ಆನೆಗಳ ಗುದ್ದಾಟ; ಆತಂಕ ಸೃಷ್ಟಿ
ಅದ್ದೂರಿ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಜಂಬೂ ಸವಾರಿಗಾಗಿ ಆನೆಗಳು ಕೂಡ ತಾಲೀಮು ನಡೆಸುತ್ತಿವೆ. ಆದರೆ ಶುಕ್ರವಾರ ರಾತ್ರಿ ಅರಮನೆ ಆವರಣದಲ್ಲಿ ಆನೆಗಳು ಗುದ್ದಾಡಿಕೊಂಡು ರಸ್ತೆಗೆ ಓಡಿಬಂದ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದಸರಾ ಹಬ್ಬಕ್ಕೆ ತಾಲೀಮು ನಡೆಸುವ ಆನೆಗಳೇ ಜಗಳ ಆಡಿಕೊಂಡಿರುವುದು ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿತ್ತು.
ಶುಕ್ರವಾರ ರಾತ್ರಿ 7:45ರ ಸಮಯದಲ್ಲಿ ಆಹಾರ ತಿನ್ನುವ ಸಂದರ್ಭದಲ್ಲಿ ಧನಂಜಯ ಹಾಗೂ ಕಂಜನ್ ಆನೆಗಳ ನಡುವೆ ಗುದ್ದಾಟ ಶುರುವಾಗಿದೆ. ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಏಕಾಏಕಿ ಕಂಜನ್ ಹಾಗೂ ಧನಂಜಯ ಆನೆಗಳು ಓಡುತ್ತಾ ಹೊರಬಂದವು. ಮಾವುತನಿಲ್ಲದ ಕಂಜನ್ ಆನೆಯನ್ನು ಧನಂಜಯ್ ಆನೆ ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದಿದೆ.

ಎರಡೂ ಆನೆಗಳು ದೊಡ್ಡಕೆರೆ ಮೈದಾನದ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ನುಗ್ಗುತ್ತಿದ್ದಂತೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿ ಹೋದರು. ತಕ್ಷಣ ಜಾಗೃತರಾದ ಮಾವುತರು ಹಾಗೂ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಮೂಲಕ ಭಾರಿ ಅನಾಹುತ ತಪ್ಪಿತು. ಸ್ಥಳದಲ್ಲಿ ನೆರೆದಿದ್ದ ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.
ಕಂಜನ್ ಆನೆ ಕಾಲಿಗೆ ಗಾಯ
ದುಬಾರೆ ಆನೆ ಶಿಬಿರದ 25 ವರ್ಷದ ಕಂಜನ್ ಆನೆ ಎರಡನೇ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ. ಆದರೆ ಈ ಬಾರಿ ಕಾಲಿಗೆ ಗಾಯವಾದ ಕಾರಣ ತಾಲೀಮಿನಿಂದ ವಿನಾಯಿತಿ ನೀಡಿ ವಿಶ್ರಾಂತಿ ನೀಡಲಾಗಿತ್ತು. ಅರಮನೆಯಿಂದ ಹೊರಗೆ ಓಡುವಾಗಲೂ ಅದು ಕುಂಟುತ್ತಾ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.












Click it and Unblock the Notifications