ಮೈಸೂರು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ: ಅತಿಥಿ ಶಿಕ್ಷಕ ನೇಮಕಕ್ಕೆ ಕ್ರಮ
ಮೈಸೂರು, ಜೂನ್ 07: ಮೈಸೂರು ಜಿಲ್ಲೆಯಲ್ಲಿ ಬೇಸಿಗೆ ರಜೆ ಮುಗಿದು ಮತ್ತೆ ಶಾಲೆಗಳು ಆರಂಭಗೊಂಡಿವೆ. ಆದರೆ, ಪಾಠ ಮಾಡಲು ಶಿಕ್ಷಕರ ಕೊರತೆ ಉಂಟಾಗಿದೆ. ಖಾಲಿ ಹುದ್ದೆ ಭರ್ತಿಯಾಗದ ಪರಿಣಾಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ತೊಡಕಾಗಿದೆ.
ಜಿಲ್ಲೆಯಲ್ಲಿ ಸರಕಾರಿ ಮತ್ತು ಅನುದಾನ ಹಾಗೂ ಅನುದಾನರಹಿತ ಒಟ್ಟು 3,446 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇವೆ. ಆದರೆ, ಅಗತ್ಯವಿರುವಷ್ಟು ಶಿಕ್ಷಕರು ಇಲ್ಲ. ಇದೀಗ ಶಾಲಾ ತರಗತಿಗಳು ಸುಗಮವಾಗಿ ನಡೆಯಲು ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ.

ಜಿಲ್ಲೆಯಲ್ಲಿ ಎದುರಾಗಿರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ಅವರು ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಿದ್ದಾರೆ. ಜಿಲ್ಲೆಯಲ್ಲಿ 1798 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಇದೆ. ಪ್ರೌಢಶಾಲಾ ಹಂತದಲ್ಲಿ ಬೇಡಿಕೆ ಇರುವ ಶಿಕ್ಷಕರ ಸಂಖ್ಯೆ 284. ಪ್ರಸ್ತುತ ಹಂಚಿಕೆಯಾಗಿರುವ ಅತಿಥಿ ಶಿಕ್ಷಕರ ಸಂಖ್ಯೆ 232.
'ಮೈಸೂರು ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಂಡಿವೆ. ಮೊದಲ ದಿನಕ್ಕೆ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಗಿದೆ. ಆದರೆ, ಜಿಲ್ಲೆಯ ಕೆಲವು ಕಡೆ ಶಿಕ್ಷಕರ ಕೊರತೆ ಇದೆ. ಅಂತಹ ಶಾಲೆಗಳನ್ನು ಈಗಾಗಲೇ ಗುರುತಿಸಿದ್ದು, ತಾಲೂಕುವಾರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಆದೇಶ ಮಾಡಲಾಗಿದೆ. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು' ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.
ಇನ್ನು ಅತಿಥಿ ಶಿಕ್ಷಕರನ್ನು ನೇಮಿಸಿ ತರಗತಿ ನಡೆಸುವುದು ಸಹ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ನೇರ ಪರಿಣಾಮ ಬೀರಲಿದೆ. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರು ನೇಮಕ ಮಾಡಿದರೂ ಸರಿಯಾಗಿ ಪಾಠ ಪ್ರವಚನ ನಡೆಯದಿರುವುದು ಕಂಡು ಬರುತ್ತಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರಕಾರ ಮುಂದಾದರೆ ವಿದ್ಯಾರ್ಥಿಗಳಿಗೆ ಅನುಕೂಲಕರ ಎಂದು ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಸೋಮೇಗೌಡ ಹೇಳಿದ್ದಾರೆ.
ಕೆಲ ವರ್ಷಗಳಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬದೇ ಇರುವುದೇ ಹುದ್ದೆ ಖಾಲಿ ಉಳಿದುಕೊಳ್ಳಲು ಪ್ರಮುಖ ಕಾರಣವಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಕೊರತೆ ಇರುವ ಹುದ್ದೆಗಳನ್ನು ಗಣನೆಗೆ ತೆಗೆದುಕೊಂಡು ಶೇ. 65ರಷ್ಟು ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ.
ಅತಿಥಿ ಶಿಕ್ಷಕರ ಆಸರೆ
ಮೈಸೂರು ಜಿಲ್ಲೆಯ ಪ್ರಾಥಮಿಕ ಶಾಲಾ ವಿಭಾಗಕ್ಕೆ 1090 ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಸರಕಾರ ಅನುಮತಿ ನೀಡಿದೆ. ಈ ಸೌಲಭ್ಯವನ್ನು ತಾಲೂಕುವಾರು ಸಮನಾಗಿ ಹಂಚಿಕೆ ಮಾಡಲಾಗಿದೆ. ಇದಲ್ಲದೇ ಪ್ರೌಢಶಾಲೆಗೂ 232 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸೂಚಿಸಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಇಲಾಖೆಯ ಉಪ ನಿರ್ದೇಶಕರು, ತಾಲೂಕುವಾರು ಎಷ್ಟು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಶಾಲಾ ಮಟ್ಟದಲ್ಲಿಯೇ ಅರ್ಜಿ ಆಹ್ವಾನಿಸಲಾಗಿದೆ.












Click it and Unblock the Notifications