ವಿಷಪ್ರಸಾದ ಸೇವನೆ : ದಾರಿತಪ್ಪಿದ ಚಾಲಕನಿಂದ 35 ಜೀವ ಉಳಿಯಿತು
ಮೈಸೂರು, ಡಿಸೆಂಬರ್ 17 : ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷ ಬೆರೆಸಸಿ 14 ಜನರು ಸಾವಿಗೀಡಾಗಿದ್ದಾರೆ. ದುರಂತದಲ್ಲಿ ಇನ್ನಷ್ಟು ಜನರು ಬಲಿಯಾಗುವದನ್ನು ಬಸ್ ಚಾಲಕನೊಬ್ಬ ತಪ್ಪಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಿಶೇಷ ಪೂಜೆಗೆಂದು ಸುಳವಾಡಿ ಮಾರಮ್ಮ ದೇವಸ್ಥಾನಕ್ಕೆ ಬಸ್ ನಲ್ಲಿ ಹೊರಟಿದ್ದ 35 ಜನರು, ಬಸ್ ಚಾಲಕನಿಗೆ ಮಾರ್ಗ ತಪ್ಪಿದ ಪರಿಣಾಮ ಬೇರೊಂದು ಮಾರಮ್ಮ ದೇವಸ್ಥಾನಕ್ಕೆ ತಲುಪಿದ್ದಾರೆ. ಬಸ್ ಚಾಲಕನ ಗೊಂದಲದ ತಪ್ಪಿನಿಂದಾಗಿ ದೇವಸ್ಥಾನಕ್ಕೆ ಬರಬೇಕಿದ್ದ 35 ಮಹಿಳೆಯರು ಬೇರೊಂದು ಸ್ಥಳಕ್ಕೆ ಹೋಗಿದ್ದಾರೆ. ಪರಿಣಾಮ ಈ 35 ಮಹಿಳೆಯ ಜೀವ ಉಳಿದಿದೆ ಎನ್ನಬಹುದು.
ಸುಳ್ವಾಡಿಯ ಪಕ್ಕದಲ್ಲೇ ಇರುವ ಮಠಹಳ್ಳಿಯಿಂದ ಬೆಳಿಗ್ಗೆಯೇ 35 ಮಹಿಳೆಯರು ಪೂಜೆಗೆಂದು ಬಸ್ಸಿನಲ್ಲಿ ಹೊರಟಿದ್ದರು. ಆದರೆ ಬಸ್ ಚಾಲಕ ಸೇತು ರಸ್ತೆ ಮಾರ್ಗ ಗೊಂದಲದಿಂದಾಗಿ ಸುಳವಾಡಿಗಿಂತ 15 ಕಿ.ಮೀ ಹಿಂದೆ ಇರುವ ರಾಂಪುರ ಮಾರಮ್ಮ ದೇವಸ್ಥಾನಕ್ಕೆ ಬಸ್ ತಂದು ನಿಲ್ಲಿಸಿದ್ದರು.

ಆರಂಭದಲ್ಲಿ ಸುಳವಾಡಿ ದೇವಸ್ಥಾನದಲ್ಲಾದ ದುರಂತ ಅರಿಯದ ಬಸ್ ಪ್ರಯಾಣಿಕರು ಬಸ್ ಚಾಲಕನ ಬೇಜವಾಬ್ದಾರಿಗೆ ಬೈದಿದ್ದರು. ಆದರೆ ಸುಳವಾಡಿ ದೇವಸ್ಥಾನದ ಪ್ರಸಾದದಲ್ಲಿ ವಿಷವಿದ್ದ ಪರಿಣಾಮ ಅದನ್ನು ತಿಂದು ಭಕ್ತರು ಸಾವನ್ನಪ್ಪುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ 35 ಮಹಿಳಾ ಪ್ರಯಾಣಿಕರು ಸಾವಿನಂಚಿನಿಂದ ತಾವು ಬಚಾವ್ ಆಗಿದ್ದಕ್ಕೆ ನಿಟ್ಟುಸಿರುಬಿಟ್ಟಿದ್ದಾರೆ. ಅಲ್ಲದೇ ಚಾಲಕ ಸೇತುರವರ ಕಾಯಕಕ್ಕೆ ಭೇಷ್ ಎಂದಿದ್ದಾರೆ.












Click it and Unblock the Notifications