ಸಚಿವ ಮಹದೇವಪ್ಪ ಮನೆಗೆ ಭೇಟಿ ನೀಡಿದ್ದ ಬಗ್ಗೆ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ
ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರ ಮನೆಯಲ್ಲಿ ಭೋಜನಕ್ಕೆ ಆಹ್ವಾನಿಸಿದ್ದರು. ಅದಕ್ಕೆ ಬೆಲೆ ಕೊಟ್ಟು ನಾವು ಊಟಕ್ಕೆ ಹೋಗಿದ್ದೆವೆ, ಇದಕ್ಕೆ ಯಾವುದೇ ರಾಜಕೀಯದ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಅವರು, ಭೋಜನ ಕೂಟದಲ್ಲಿ ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್.ಕೃಷ್ಣ ಮೂರ್ತಿ ಇದ್ದೆವು. ಈ ವೇಳೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

ನಿಮಗೆ ಸಿಎಂ ಆಗುವ ಆಸೆ ಇಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಪ್ರಶ್ನೆಯೇ ಇಲ್ಲ. ದಲಿತ ಸಿಎಂ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದರು. ಹರಿಯಾಣ ಸೋಲು ಸಂಬಂಧ ಕಾಂಗ್ರೆಸ್ ನಾಯಕ ಕೋಳಿವಾಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಕೋಳಿವಾಡ ಹೇಳಿಕೆ ವೈಯಕ್ತಿಕವಾದುದು. ಹರಿಯಾಣ ಸೋಲಿಗೆ ಬೇರೆ ಕಾರಣಗಳಿವೆ. ಅದನ್ನು ಹೈಕಮಾಂಡ್ ವಿಶ್ಲೇಷಣೆ ಮಾಡುತ್ತಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನನ್ನ ಪುತ್ರ ಸುನೀಲ್ ಬೋಸ್ ಮೊದಲ ಬಾರಿಗೆ ಸಂಸದರಾಗಿರುವ ಹಿನ್ನೆಲೆ ಪಕ್ಷದ ಹಿರಿಯರಿಗೆ ಭೋಜನ ಕೂಟ ಏರ್ಪಡಿಸಿದ್ದರು. ಹಾಗಾಗಿ ಭೋಜನ ಕೂಟದಲ್ಲಿ ನಾನು, ನನ್ನ ಸಹೋದ್ಯೋಗಿ ಮಿತ್ರರಾದ ಡಾ.ಕೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಒಟ್ಟಿಗೆ ಊಟ ಮಾಡಿದೆವು ಎಂದರು.
ಪರಮೇಶ್ವರ್ ಅವರು ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಪೊಲೀಸ್ ಬ್ಯಾಂಡ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಗೆಯೇ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮೈಸೂರಿಗೆ ಆಗಮಿಸಿದ್ದರು. ಇದೇ ಸಂದರ್ಭ ರಸ್ತೆ, ಕುಡಿಯುವ ನೀರು ಅಂತ ಬೇರೆ ಬೇರೆ ಕೆಲಸಕ್ಕೆ ಶಾಸಕರನ್ನು ಭೇಟಿಯಾಗಿದ್ದಾರೆ ಅಷ್ಟೇ ಎಂದು ಹೇಳಿದರು.
ಸಿಎಂ ಬದಲಾವಣೆ ಚರ್ಚೆ
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿರುವ ಹಿನ್ನಲೆಯಲ್ಲಿಯಲ್ಲಿ ಈ ಮೂವರು ಸಚಿವರ ಭೇಟಿ ಮಹತ್ವ ಪಡೆದುಕೊಂಡಿದೆ. ಸತೀಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು, ಅದಕ್ಕೂ ಹಿಂದಿನ ದಿನ ತುಮಕೂರಿನಲ್ಲಿ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಬಳಿಕ ಮೈಸೂರಿನಲ್ಲಿ ಹಿರಿಯ ನಾಯಕ, ಸಚಿವ ಡಾ. ಮಹದೇವಪ್ಪ ಅವರ ಮನೆಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ಡಾ. ಜಿ ಪರಮೇಶ್ವರ್ ಭೇಟಿಯಾಗಿದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿತ್ತು. ಸತೀಶ್ ಜಾರಕಿಹೊಳಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಎಂ ಬದಲಾವಣೆ ಬಗ್ಗೆ ನಮಗೆ ಗೊತ್ತಿಲ್ಲ, ಹೈಕಮಾಂಡ್‌ಗೆ ಕೇಳಬೇಕು. ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದು ಹೇಳಿದ್ದಾರೆ.












Click it and Unblock the Notifications