Dog Show in Mysuru: ದಸರಾ ಉತ್ಸವ ಪ್ರಯುಕ್ತ ಶ್ವಾನ ಪ್ರದರ್ಶನ; 45 ತಳಿ, 480 ಅಧಿಕ ಮುದ್ದಾದ ನಾಯಿಗಳು
ಮೈಸೂರು ದಸರಾ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಜನಮನ ಸೆಳೆಯುತ್ತಿವೆ. ದಸರಾ ಪ್ರಯುಕ್ತ ಭಾನುವಾರ ನಾಯಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು, ಈ ಪ್ರದರ್ಶನದಲ್ಲಿ ದೇಶ-ವಿದೇಶದ ನಾಯಿಗಳು ತಮ್ಮ ತುಂಟಾಟ, ಓಡಾಟದ ಮೂಲಕ ನೂರಾರು ಜನರನ್ನು ಆಕರ್ಷಿಸಿದವು.
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜೆ.ಕೆ ಮೈದಾನದಲ್ಲಿ ನಡೆದ 'ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯ' ಕಾರ್ಯಕ್ರಮದಲ್ಲಿ, ನಾಯಿಗಳ ಆಟ-ಪಾಠ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕಿದ ಶ್ವಾನಗಳ ಬುದ್ಧಿವಂತಿಕೆ ಹಾಗೂ ಪ್ರೀತಿಯನ್ನು ಪ್ರವಾಸಿಗರು ಕಣ್ತುಂಬಿಕೊಂಡು ಮುದ್ದಾದ ನಾಯಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಪರ್ಧೆಯಲ್ಲಿ ಜರ್ಮನ್ ಶೆಫರ್ಡ್, ಟಿಬೆಟಿಯನ್ ಮಸ್ಟಿಫ್, ಇಂಡಿಯನ್ ಮಸ್ಟಿಫ್, ಡಾಬರ್ ಮ್ಯಾನ್, ಮುಧೋಳ್, ಸಿಬೇರಿಯನ್ ಹಸ್ಕಿ, ಐರಿಷ್ ಶೆಟ್ಟರ್, ಅಕಿಟಾ, ಲೆಬ್ರಡರ್ ಲ್ಯಾಬ್ರಡರ್, ಪೂಡ್ಲೆ, ಡಾಗೋ ಅರ್ಜೆಂಟೈನಾ, ಗ್ರೇಟ್ ಡೇನ್, ಪೋಮೋರಿಯನ್, ರಾಜ ಪಲ್ಯಮ್, ಪಿಟ್ ಬುಲ್ ಹಾಗೂ ಗೋಲ್ಡನ್ ರಿಟ್ರೀವರ್, ಕಾಕರ್ ಸ್ಫ್ಯಾನಿಯಲ್, ಅಮೇರಿಕನ್ ಬುಲ್ಲಿ, ಬಾಕ್ಸರ್, ಬೀಗಲ್, ಫ್ರೆಂಡ್ಸ್ ಬುಲ್ ಡಾಗ್, ಚೌಚೌ, ಪಗ್, ಡಚ್ ಶೆಫರ್ಡ್ , ಟಿಬೇಟಿಯನ್ ಸ್ಫ್ಯಾನಿಯಲ್, ರಾಟ್ ವಿಲ್ಲರ್, ಸೈಂಟ್ ಬೆರ್ನಾರ್ಡ್ ತಳಿಯ ನಾಯಿಗಳು ಗಮನ ಸೆಳೆದವು.
ಕಳೆದ ಬಾರಿ ದಸರಾದಲ್ಲಿ ಸುಮಾರು 20 ರಿಂದ 25 ತಳಿಗಳ ಶ್ವಾನಗಳು ಮಾತ್ರ ನೋಂದಣಿಯಾಗುತ್ತಿದ್ದು, ಈ ಬಾರಿಯ ದಸರಾದಲ್ಲಿ 45 ತಳಿಗಳು ಪ್ರದರ್ಶನದಲ್ಲಿ ನೊಂದಣಿಯಾಗಿವೆ. ಅದರಲ್ಲಿ ಪ್ರಮುಖವಾಗಿ 12 ತಳಿಗಳು ವಿದೇಶಿಯದ್ದಾಗಿದ್ದು, ಉಳಿದ ಎಲ್ಲಾ ತಳಿಗಳು ಸ್ವದೇಶಿಯದ್ದಾಗಿದೆ.
ಸುಧಾ ಮೂರ್ತಿ ಭಾಗಿ
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಾಜ್ಯ ಸಭೆಯ ಸದಸ್ಯೆ ಸುಧಾಮೂರ್ತಿ ಮಾತನಾಡಿ, ಮುದ್ದು ಪ್ರಾಣಿಗಳು ನಮ್ಮ ಮಕ್ಕಳಿದ್ದಂತೆ ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಅನಾರೋಗ್ಯಕ್ಕೆ ತುತ್ತಾಗಿರುವ ಹಾಗೂ ಗಾಯಗೊಂಡ ಎಷ್ಟೋ ಬೀದಿ ನಾಯಿಗಳಿದ್ದು. ನಮ್ಮ ಮಕ್ಕಳೊಂದಿಗೆ ಅವುಗಳ ಹಾರೈಕೆಗೆ ಮುಂದಾಗಬೇಕು. ಇಂತಹ ಶ್ವಾನಗಳ ಪ್ರದರ್ಶನದಿಂದ ಮಕ್ಕಳಲ್ಲಿ ಪ್ರಾಣಿ ಪ್ರೀತಿ ಹೆಚ್ಚಾಗುತ್ತದೆ ಎಂದರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಹಾಗೂ ಮೂಲ ತಳಿಗಳ ಶ್ವಾನಗಳನ್ನು ಶ್ವಾನ ವೈದ್ಯಾಧಿಕಾರಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿದಂತಹ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ಜಾತಿಯ ನಾಯಿಮರಿಗಳನ್ನು ನೋಡಲು ಸಾವಿರಾರು ಜನ ಆಗಮಿಸಿದ್ದರು.












Click it and Unblock the Notifications