ದೇವಾಲಯ ಎಲ್ಲರಿಗೂ ಮುಕ್ತ ಎಂಬ ಬೋರ್ಡ್ ಹಾಕಿ : ಮೈಸೂರು ಡಿಸಿ
ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಮುಂದೆ ಯಾವುದೇ ಜಾತಿ, ಲಿಂಗ ಬೇಧವಿಲ್ಲದೇ ಸರ್ವರಿಗೂ ದೇವಾಲಯಕ್ಕೆ ಮುಕ್ತ ಪ್ರವೇಶವಿರುತ್ತದೆ ಎಂಬ ಫಲಕ ಹಾಕಿ : ಡಿಸಿ ರಂದೀಪ್
ಮೈಸೂರು, ಮೇ. 4.: ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಮುಂದೆ ಯಾವುದೇ ಜಾತಿ, ಲಿಂಗ ಬೇಧವಿಲ್ಲದೇ ಸರ್ವರಿಗೂ ದೇವಾಲಯಕ್ಕೆ ಮುಕ್ತ ಪ್ರವೇಶವಿರುತ್ತದೆ ಎಂಬ ಫಲಕವನ್ನು ಮೇ 20 ರೊಳಗಾಗಿ ಅನಾವರಣಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ರಂದೀಪ್ ಡಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಕೆಲವು ದೇವಾಲಯಗಳಲ್ಲಿ ಫಲಕಗಳನ್ನು ಅನಾವರಣ ಮಾಡುವ ಕೆಲಸ ಮೊದಲು ಆಗಬೇಕಿದೆ. ಫಲಕಗಳಲ್ಲಿ ಜಾತಿಯ ಬೇಧ ಮಾಡಿ ಪ್ರವೇಶ ನಿರಾಕರಿಸಿದರೆ ನೀಡಲಾಗುವ ಶಿಕ್ಷೆ ಹಾಗೂ ಇಂತಹ ಪದ್ಧತಿಗಳು ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ಕಂಟ್ರೊಲ್ ರೂಂಗೆ ದೂರು ಸಲ್ಲಿಸುವಂತೆ ದೂರವಾಣಿ ಸಂಖ್ಯೆಯನ್ನು ಸಹ ಅನಾವರಣಗೊಳಿಸುವಂತೆ ತಿಳಿಸಿದರು.
ಅಸ್ಪೃಶ್ಯತೆ ಆಚರಣೆ ಸಾಮಾಜಿಕ ಪಿಡುಗಾಗಿದ್ದು, ಇದರ ನಿರ್ಮೂಲನೆಗಾಗಿ ತಾಲ್ಲೂಕು ಹಾಗೂ ಆಯ್ದ ಗ್ರಾಮಗಳಲ್ಲಿ 'ನಮ್ಮ ನಡೆ ಅಸ್ಪೃಶ್ಯತೆ ನಿರ್ಮೂಲನಾ ಕಡೆಗೆ' ಎಂಬ ಕ್ಷೌರ ಶಿಬಿರ ಹಾಗೂ ಬೀದಿ ನಾಟಕಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಬಾಕಿ ಇರುತ್ತದೆ. ಡಾ: ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಶಿಬಿರವನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲಾಗುವುದು ಎಂದರು.
ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ನೀಡಲಾಗುವ ಪ್ರವಾಸ ಭತ್ಯೆ ಪಡೆಯಲು ನ್ಯಾಯಾಲಯದಲ್ಲಿ ಹಾಜರಾತಿ ಪತ್ರ ಪಡೆದು ತಾಲ್ಲೂಕು ಮಟ್ಟದ ಸಮಾಜ ಕಲ್ಯಾಣಾಧಿಕಾರಿಗಳ ಶಿಫಾರಸ್ಸು ಪತ್ರದೊಂದಿಗೆ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಿತ್ತು.
ಸಭೆಯಲ್ಲಿ ಜಿಲ್ಲಾಧಿಕಾರಿಗಳು ನ್ಯಾಯಾಲಯದಿಂದ ನೀಡಲಾಗುವ ಹಾಜರಾತಿ ಪತ್ರವನ್ನು ಸಂತ್ರಸ್ತರು ನೇರವಾಗಿ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಸಲ್ಲಿಸಿ ಭತ್ಯೆ ಪಡೆದುಕೊಳ್ಳಬಹುದು. ತಾಲ್ಲೂಕು ದಂಡಾಧಿಕಾರಿಗಳು ನೀಡಲಾಗುವ ಭತ್ಯೆಯ ವಿವರವನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಸರಳಗೊಳಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು.











Click it and Unblock the Notifications