ಮೈಸೂರು: ಚುಂಚನಕಟ್ಟೆಯಲ್ಲಿ ತೀರ್ಥಸ್ನಾನಕ್ಕಾಗಿ ಭಕ್ತರ ಪರದಾಟ..ಆಗಿದ್ದೇನು?
ಚುಂಚನಕಟ್ಟೆ ದೇವಾಲಯಕ್ಕೆ ಬರುವ ಭಕ್ತಾಧಿಗಳು ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ಮಾಡಲು ಹಾಗೂ ನದಿ ದಡದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಸೂರು, ಮಾರ್ಚ್ 9: ಪುರಾಣ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮೈಸೂರಿನ ಚುಂಚನಕಟ್ಟೆಯು ರಾಮನ ಕ್ಷೇತ್ರವಾಗಿ ರಾಮದೇಗುಲದಿಂದ ಪ್ರಸಿದ್ಧಿ ಹೊಂದಿದೆ. ಆದರೆ ಈ ಕ್ಷೇತ್ರ ಕಾವೇರಿ ನದಿ ದಡದಲ್ಲಿದ್ದರೂ ಈಗ ಇಲ್ಲಿಗೆ ಆಗಮಿಸುವ ಭಕ್ತರು ಸ್ನಾನ ಮಾಡಲು ಮತ್ತು ಅರ್ಚಕರು ದೇವರನ್ನು ಶುದ್ದಿಗೊಳಿಸಲು ಪರದಾಡುವಂತಾಗಿದ್ದು, ಪಕ್ಕದ ಕಾಲುವೆಯಲ್ಲಿ ಮುಜುಗರದಿಂದ ಮಕ್ಕಳು ಮಹಿಳೆಯರು ಸ್ನಾನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚುಂಚನಕಟ್ಟೆ ಬರೀ ಯಾತ್ರಾ ಸ್ಥಳ ಮಾತ್ರ ಆಗಿರದೆ, ಪ್ರವಾಸಿ ತಾಣವೂ ಆಗಿರುವುದರಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಅದರಲ್ಲೂ ರಾಮನ ದರ್ಶನಕ್ಕೆಂದು ಬರುವ ಭಕ್ತರು ಇಲ್ಲಿನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಮಡಿಯಾಗಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದರು. ಇನ್ನೊಂದೆಡೆ ಇಲ್ಲಿ ಧನುಷ್ಕೋಟಿ ಜಲಪಾತವಿದ್ದು ಇದನ್ನು ವೀಕ್ಷಿಸಲು ಪ್ರವಾಸಿಗರು ತೆರಳುತ್ತಿದ್ದರು.
ಆದರೆ ಇಲ್ಲಿನ ಕಾವೇರಿ ನದಿಯ ನೀರಿನಲ್ಲಿ ಒಂದು ತಿಂಗಳ ಹಿಂದೆ ಯುವಕನೊಬ್ಬ ಸ್ನಾನ ಮಾಡಲು ಹೋಗಿ ತೀರ್ಥ ಕಡದಲ್ಲಿ ಮುಳುಗಿ ಮೃತಪಟ್ಟಿದ್ದನು. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ನದಿಗೆ ಹೋಗದಂತೆ ರಸ್ತೆಯನ್ನೇ ಬಂದ್ ಮಾಡಲಾಗಿದೆ. ಪರಿಣಾಮ ದೇವಾಲಯಕ್ಕೆ ಬರುವ ಭಕ್ತಾಧಿಗಳು ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ಮಾಡಲು ಹಾಗೂ ನದಿ ದಡದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯ ರಸ್ತೆಯ ಕಾಲುವೆಯ ನೀರಿನಲ್ಲಿ ಭಕ್ತರ ಸ್ನಾನ
ಕ್ಷೇತ್ರಕ್ಕೆ ಮುಡಿ ಇನ್ನಿತರ ಹರಕೆ ತೀರಿಸಲು ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಕಡೆಗಳಿಂದ ಭಕ್ತರು ಆಗಮಿಸುತ್ತಿದ್ದು, ಹೀಗೆ ಬರುವ ಭಕ್ತರು ನದಿಯಲ್ಲಿ ಸ್ನಾನ ಮಾಡಿ ಧಾರ್ಮಿಕ ಸೇವಾ ಕಾರ್ಯವನ್ನು ನಡೆಸ ಬೇಕಾಗಿದೆ. ಆದರೆ ನದಿಗೆ ಪ್ರವೇಶವಿಲ್ಲದ ಕಾರಣ ಮಹಿಳೆಯರು ಸೇರಿದಂತೆ ಮಕ್ಕಳು ಸಾರ್ವಜನಿಕ ಸಂಚಾರವಿರುವ ಮುಖ್ಯ ರಸ್ತೆಯಲ್ಲಿರುವ ಕಾಲುವೆಯ ನೀರಿನಲ್ಲಿ ಮುಜುಗರದಿಂದ ಸ್ನಾನ ಮಾಡಿ, ತುಂಡು ಬಟ್ಟೆಗಳ ಮರೆಯಲ್ಲಿ ಬಟ್ಟೆ ಬದಲಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಬೇಸಿಗೆಯ ರಜಾ ಸಮಯದಲ್ಲಿ ಕಾಲುವೆಯಲ್ಲೂ ನೀರಿಲ್ಲದೆ ಸ್ನಾನ ಮಾಡಲು 2ಕೀ.ಮೀ ದೂರದ ಶ್ರೀ ರಾಮಲಿಂಗೆಶ್ವರ ದೇವಾಲಯದ ಬಳಿ ಇರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿಕೊಂಡು ಹಿಂದಿರುಗಿ ದೇಗುಲದಲ್ಲಿ ಅಭಿಷೇಕ ಇನ್ನಿತರ ಹರಕೆಯ ಸೇವಾ ಕಾರ್ಯಗಳನ್ನು ನಡೆಸುವ ದುಸ್ಥಿತಿ ಎದುರಾಗಿದೆ. ಸಾಮಾನ್ಯವಾಗಿ ತಾಲೂಕು ಸೇರಿದಂತೆ ನೆರೆ ಹೊರೆಯ ತಾಲೂಕಿನ ಸುಮಾರು 50 ಕೀ.ಮೀ ದೂರದ ಊರುಗಳ ಗ್ರಾಮ ದೇವರನ್ನು ತಂದು ಪವಿತ್ರ ಕಾವೇರಿ ನದಿಯ ಜಲದಿಂದ ಜಳಕ ಮಾಡಿಸುವುದು ವಾಡಿಕೆಯಾಗಿದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪ್ರತೀತಿಯಾಗಿದೆ. ಆದರೆ ಈಗ ನದಿಗೆ ಹೋಗುವುದನ್ನು ಬಂದ್ ಮಾಡಿರುವುದರಿಂದ ತೊಂದರೆಯಾಗಿದೆ ಎಂಬುದು ಭಕ್ತರ ಅಳಲಾಗಿದೆ.

ಸೂಚನಾ ಫಕಲ ಲೆಕ್ಕಿಸದೇ ಅಪಾಯಕ್ಕೆ ಸಿಲುಕುವ ಜನರು
ಇದೆಲ್ಲದರ ನಡುವೆ ಕ್ಷೇತ್ರಕ್ಕೆ ಆಗಮಿಸುವ ಜನರು ಕೂಡ ನದಿಯಲ್ಲಿ ಸುಳಿಗಳಿವೆ, ನದಿಯ ಅಪಾಯದ ಸ್ಥಳಗಳಲ್ಲಿ ಇಳಿಯ ಬೇಡಿ ಎಂಬ ನಾಮಫಲಕವಿದ್ದರೂ ಅದನ್ನು ಲೆಕ್ಕಿಸದೆ ಅನಾಗರಿಕರಂತೆ ನದಿಯಲ್ಲಿ ಈಜಲು ಮುಂದಾಗುವುದಲ್ಲದೆ, ಅಪಾಯಕಾರಿ ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿ ಸಾಯುವುದು ಸೇರಿದಂತೆ ಹಲವು ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ನದಿಯತ್ತ ತೆರಳದಂತೆ ಬಂದ್ ಮಾಡಲಾಗಿದೆ.
ಮುಂಜಾಗ್ರತೆ ಕ್ರಮವಾಗಿ ಶಾಶ್ವತವಾಗಿ ಅಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವ ಮೂಲಕ ದುರ್ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಹಾಗೂ ಭಕ್ತರಿಗೆ ನದಿಗೆ ತೆರಳಲು ಅವಕಾಶ ಮಾಡಿಕೊಡಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಹಸೀಲ್ದಾರ್ ಮೋಹನ್‌ಕುಮಾರ್ ಅವರು" ಭಕ್ತರ ಹಾಗೂ ಸಾರ್ವಜನಿಕ ಸುರಕ್ಷತೆ ದೃಷ್ಠಿಯಿಂದ ಬಂದ್ ಮಾಡಿದ್ದು. ಈ ಸಮಸ್ಯೆ ಬಗ್ಗೆ ಸಂಬಂಧಿಸಿದಂತೆ ದೇಗುಲದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಕೊಂಡು ಅನುಕೂಲ ಮಾಡಲಾಗುವುದು" ಎಂದು ಹೇಳಿದ್ದಾರೆ.

ಪುರಾಣದಲ್ಲಿ ಚುಂಚನಕಟ್ಟೆಯ ಉಲ್ಲೇಖವೇನು?
ಇನ್ನು ಚುಂನಕಟ್ಟೆಯ ಕ್ಷೇತ್ರದ ಮಹಿಮೆಯ ಬಗ್ಗೆ ಹೇಳುವುದಾದರೆ ಹಿಂದಿನ ಕಾಲದಲ್ಲಿ ಈ ಕ್ಷೇತ್ರವು ದಟ್ಟ ಕಾಡಿನಿಂದ ಕೂಡಿದ ಅರಣ್ಯವಾಗಿತ್ತಂತೆ. ಇದನ್ನು ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತಂತೆ. ಹೀಗಿರುವಾಗ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ.
ಈ ವೇಳೆ ಅವರಿಗೆ ಅಲ್ಲಿಯೇ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ. ಹೀಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ. ಅವರ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾರೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಮಾತು ನೀಡುತ್ತಾನೆ.

ಚುಂಚನಕಟ್ಟೆ ಎಂಬ ಹೆಸರು ಹೇಗೆ ಬಂತು?
ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ಸೇನೆಯು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬಂದಿದ್ದರೆಂದೂ ಈ ವೇಳೆ ಲಕ್ಷ್ಮಣನಿಗೆ ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಕಾವೇರಿ ಉಕ್ಕಿ ಹರಿಯುತ್ತಾಳೆ.
ಆ ಶಬ್ದ ಲಕ್ಷ್ಮಣನ ಕಿವಿಗೆ ನಾಟಿ "ಹೆಣ್ಣಿಗೆ ಇಷ್ಟೊಂದು ನಾಲಿಗೆ ಇರಬಾರದು" ಎಂದು ಉದ್ಘರಿಸುತ್ತಾನೆ. ಅದರಂತೆ ಇಂದಿಗೂ ರಾಮದೇವರ ದೇವಾಲಯದ ಗರ್ಭಗುಡಿಯಲ್ಲಿ ಕಾವೇರಿ ಭೋರ್ಗರೆಯುವ ಶಬ್ದ ಕೇಳಿಸುವುದಿಲ್ಲ. ಇನ್ನು ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಜಲಪಾತ ಸೃಷ್ಟಿಯಾಗಿದ್ದು, ಅದುವೇ ಧನುಷ್ಕೋಟಿಯಾಗಿದೆ.
ಈ ಕ್ಷೇತ್ರಕ್ಕೆ ಚುಂಚನಕಟ್ಟೆ ಎಂಬ ಹೆಸರು ಹೇಗೆ ಬಂತು ಎನ್ನುವುದನ್ನು ನೋಡುವುದಾದರೆ ಶಾಪಕ್ಕೊಳಗಾಗಿದ್ದ ಚುಂಚ, ಚುಂಚಿ ಎಂಬ ಬೇಡ ದಂಪತಿ ಈ ದಂಡಕಾರಣ್ಯ ಪ್ರದೇಶದಲ್ಲಿ ವಾಸವಾಗಿದ್ದುಕೊಂಡು ಜನರನ್ನು ಹೆದರಿಸಿ, ಬೆದರಿಸಿ, ಅವರ ವಸ್ತುಗಳನ್ನು ಕಿತ್ತುಕೊಂಡು ಕೊಂದು ತಿನ್ನುವ ನರಭಕ್ಷಕರಾಗಿದ್ದರು. ಆದರೆ ಇಲ್ಲಿಗೆ ಆಗಮಿಸಿದ ತೃಣಬಿಂದು ಮಹರ್ಷಿಗಳನ್ನು ನೋಡಿದ ತಕ್ಷಣ ಅವರಿಗೆ ಶರಣಾಗುತ್ತಾರೆ.
ಆಗ ಅವರ ಪೂರ್ವ ಜನ್ಮದ ಬಗ್ಗೆ ತಿಳಿಸಿದ ಮಹರ್ಷಿಗಳು ಹಿಂದೆ, ನೀವು ಕಾಶಿ ದೇಶದಲ್ಲಿ ಬ್ರಾಹ್ಮಣ ದಂಪತಿಗಳಾಗಿದ್ದಿರಿ. ನೀವು ಅಮವಾಸ್ಯೆಯ ದಿವಸ ಅಭ್ಯಂಜನ ಸ್ನಾನ ( ಎಣ್ಣೆ ನೀರಿನ) ಮಾಡಿದ್ದಕ್ಕಾಗಿ ಈ ತೆರನಾದ ಶಾಪ ಬಂದಿದೆ ಎಂದು ಹೇಳುತ್ತಾರೆ. ಅಲ್ಲದೇ ಒಬ್ಬ ಬಡವ ನಿಮ್ಮ ಬಳಿಗೆ ಬಂದು ಅಡುಗೆ ಮಾಡಿಕೊಳ್ಳಲು ಸ್ವಲ್ಪ ಸ್ಥಳ ಕೇಳುತ್ತಾನೆ. ಅದಕ್ಕೆ ನೀವು ಒಪ್ಪಿ ಸ್ಥಳಾವಕಾಶ ಮಾಡಿಕೊಟ್ಟರೆ ನಿಮ್ಮ ಶಾಪ ವಿಮೋಚನೆ ಎಂದು ಹೇಳುತ್ತಾರೆ. ಅದರಂತೆ ಅವರ ಶಾಪವು ವಿಮೋಚನೆಯಾಗಿದ್ದಲ್ಲದೆ ಅವರ ಹೆಸರಿನಿಂದಲೇ ಚುಂಚನಕಟ್ಟೆ ಕ್ಷೇತ್ರವು ಪ್ರಸಿದ್ಧಿಗೆ ಬಂದಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications