ಹುಣಸೂರು ಬಡಾವಣೆಗಳಲ್ಲಿ ಅಭಿವೃದ್ಧಿ ಇನ್ನೂ ಮರೀಚಿಕೆ
ಮೈಸೂರು, ಸೆಪ್ಟೆಂಬರ್ 28: ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ಹುಣಸೂರು ಇದೀಗ ಪಟ್ಟಣ ಪಂಚಾಯಿತಿಯಿಂದ ನಗರಸಭೆಯಾಗಿ ಪರಿವರ್ತನೆಯಾಗಿದ್ದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ಹುಣಸೂರು ಪಟ್ಟಣಕ್ಕೊಂದು ಸುತ್ತು ಹೊಡೆದರೆ ಇಲ್ಲಿನ ಕಸದ ರಾಶಿ, ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ಹೀಗೆ ಹತ್ತು ಹಲವು ಸಮಸ್ಯೆಗಳು ಎದ್ದು ಕಾಣುತ್ತವೆ. ಇನ್ನು ಪ್ರತಿಷ್ಠಿತ ಬಡಾವಣೆಗಳೆಂದೇ ಕರೆಯುವ ಮಾರುತಿ, ಮಂಜುನಾಥ ಹಾಗೂ ಗೋಕುಲ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೇ ನಿವಾಸಿಗಳು ಮಳೆ ಬಂದರೆ ಕೆಸರು, ಬಿಸಿಲು ಬಂದರೆ ಧೂಳಿನ ಸಮಸ್ಯೆ ಅನುಭವಿಸುವಂತಾಗಿದೆ.

ಹುಣಸೂರು ಪಟ್ಟಣ ಪುರಸಭೆಯಿಂದ ನಗರಸಭೆಯಾಗಿ ಮೂರು ವರ್ಷಗಳೇ ಕಳೆದರೂ ಇಲ್ಲಿನ ನಿವಾಸಿಗಳಿಗೆ ಸಮರ್ಪಕವಾದ ರಸ್ತೆ, ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಈ ಕಾರಣದಿಂದ ಆಕ್ರೋಶಗೊಂಡಿರುವ ಜನ ಅಭಿವೃದ್ಧಿಯೇ ಮಾಡದ ಮೇಲೆ ನಗರಸಭೆಯಾಗಿ ಪರಿವರ್ತಿಸುವ ಜರೂರತ್ತೇನಿತ್ತು ಎಂದು ಕೇಳುತ್ತಿದ್ದಾರೆ.

ಈ ನಡುವೆ ನಗರಸಭೆ ಸದಸ್ಯರ ನಿರ್ಲಕ್ಷ್ಯದಿಂದ ಮಳೆ ಬಂದಾಗ ಜನ ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಜನ ಕೆಸರು ನೀರಿನಲ್ಲಿಯೇ ಓಡಾಡುವಂತಾಗಿದೆ. ಈ ಬಗ್ಗೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಅಸಮಾಧಾನವಾಗಿದೆ.

ಜತೆಗೆ ಪಟ್ಟಣದ ಇನ್ನಿತರ ಕಾಂಕ್ರಿಟ್ ರಸ್ತೆ, ಒಳಚರಂಡಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಈ ಬಗ್ಗೆ ನಗರಸಭೆ ಸದಸ್ಯರನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಇಲ್ಲಿನ ನಿವಾಸಿಗಳ ಪೈಕಿ ಅತಿ ಹೆಚ್ಚು ಜನರು ಸರ್ಕಾರಿ ಸೇವೆಯಲ್ಲಿದ್ದು ಪ್ರತ್ಯಕ್ಷವಾಗಿ ಈ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಬಡಾವಣೆಯ ಇತರೆ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.












Click it and Unblock the Notifications