ಮೈಸೂರು ಪಾರಂಪರಿಕ ಕಟ್ಟಡಗಳ ಮಾಹಿತಿ ನೀಡಲಿದೆ ವಿಆರ್ ಕಾರ್ಡ್
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಕಷ್ಟು ಪಾರಂಪರಿಕ ಕಟ್ಟಡಗಳಿದ್ದು, ಮೈಸೂರು ಇತಿಹಾಸದ ಭಾಗವಾಗಿವೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ವತಿಯಿಂದ ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ಬಗ್ಗೆ ಕುಳಿತಲ್ಲೇ ಮೊಬೈಲ್ ಮೂಲಕ ಮಾಹಿತಿ ತಿಳಿಯಲು ವಿಆರ್ ಕಾರ್ಡ್ ಹೊರತಂದಿದೆ.
ವಿಆರ್ ಕಾರ್ಡ್ ಹಿಂಭಾಗದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಆಪ್ ಡೌನ್ಲೋಡ್ ಆಗಲಿದ್ದು, ಆಪ್‌ನಲ್ಲಿರುವ ಕಣ್ಣಿನ ಸಿಂಬಲ್ ಅನ್ನು ಸ್ಕ್ಯಾನ್ ಮಾಡಿದಾಗ ಮೈಸೂರು ವಿಶ್ವ ವಿದ್ಯಾನಿಲಯ, ಅರಮನೆ ಸೇರಿದಂತೆ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ವೀಕ್ಷಣೆಯ ಜೊತೆಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಕಾರ್ಡ್‌ನ ಬೆಲೆ 10 ರೂ. ಆಗಿದ್ದು, ಪುರಾತತ್ವ ಇಲಾಖೆಯಲ್ಲಿ ಸಿಗಲಿದೆ.

ಪಾರಂಪರಿಕ ಕಟ್ಟಡ ಉಳಿಸಲು ಕರೆ
ಭಾನುವಾರ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ, ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು, ಮೈಸೂರಿನಲ್ಲಿ ನಮ್ಮ ಹಿರಿಯರು ಕಷ್ಟ ಪಟ್ಟು ನಿರ್ಮಾಣ ಮಾಡಿರುವಂತಹ ಹಲವಾರು ಪಾರಂಪರಿಕ ಕಟ್ಟಡಗಳಿದ್ದು, ಅವುಗಳನ್ನು ಉಳಿಸಿ, ಸಂರಕ್ಷಿಸುವ ಕರ್ತವ್ಯ ಸರ್ಕಾರದ ಜೊತೆಗೆ ಯುವ ಪೀಳಿಗೆಯದ್ದು ಆಗಿರಲಿದೆ ಎಂದು ಹೇಳಿದರು.
ಟಾಂಗಾ ಸವಾರಿ, ಬೈಕ್ ಸವಾರಿ ಹಾಗೂ ಪಾರಂಪರಿಕ ನಡಿಗೆಯಿಂದ ಪರಂಪರೆಯನ್ನು ಉಳಿಸಲಾಗುವುದಿಲ್ಲ. ಈ ಕಾರ್ಯಕ್ರಗಳು ಯುವಜನರಲ್ಲಿ ಅರಿವನ್ನು ಮೂಡಿಸಲು ಆಯೋಜಿಸಲಾಗುತ್ತದೆ, ಪ್ರತಿಯೊಬ್ಬರೂ ಪಾರಂಪರಿಕ ಕಟ್ಟಡಗಳು, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು ಎಂದರು.
ರಾಜ್ಯದಲ್ಲಿ ಸಂರಕ್ಷಣೆ ಮಾಡಿಲ್ಲದ ಹಲವಾರು ಕಟ್ಟಡಗಳಿವೆ ಹಾಗೂ ವಾಸ್ತುಶಿಲ್ಪಗಳಿವೆ. ಇದರ ಬಗ್ಗೆ ಎಷ್ಟೋ ಜನರಿಗೆ ಮಾಹಿತಿಯೇ ಇಲ್ಲ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ನಮ್ಮೊಂದಿಗೆ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಚಾಮರಾಜನರ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಗಂಗಾಧರ್ ಮಾತನಾಡಿ, ಪ್ರಪಂಚದ ಯಾವುದೇ ಸ್ಥಳಕ್ಕೆ ಹೋದರು ಮೈಸೂರು ಎಂದಾಕ್ಷಣ ನೆನಪಾಗುವುದೇ ಇಲ್ಲಿನ ಅರಮನೆ ಮತ್ತು ಪಾರಂಪರಿಕ ಕಟ್ಟಡಗಳು. ಅಂತಹ ವಿಶ್ವ ವಿಖ್ಯಾತ ಪರಂಪರೆ, ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮೈಸೂರು ಸಂಸ್ಥಾನದ ರಾಜರು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇದರ ಪ್ರತಿರೂಪವಾಗಿ ಇಂದು ಮೈಸೂರಿನಲ್ಲಿ ಹಲವಾರು ವಿಶಿಷ್ಟ ಮತ್ತು ಸುಂದರ ಕಟ್ಟಡಗಳಿವೆ ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ಜಗನ್ಮೋಹನ ಅರಮನೆ, ಮೈಸೂರು ಮೆಡಿಕಲ್ ಕಾಲೇಜು, ಕೆ ಆರ್ ಹಾಸ್ಪಿಟಲ್ ಸೇರಿದಂತೆ ಹಲವಾರು ಕಟ್ಟಡಗಲಿವೆ ಅವುಗಳನ್ನು ಉಳಿಸಿಕೊಂಡಿ ಹೋಗಬೇಕು ಇದರ ಬಗ್ಗೆ ಯುವ ಪೀಳಿಗೆಗಳಿಗೆ ಮಾಹಿತಿ ಕೊಡಬೇಕು ಎಂದರು.
ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾದ ಪಾರಂಪರಿಕ ನಡಿಗೆ ಸಿಲ್ಕರ್ ಜೂಬಿಲಿ ಕ್ಲಾಕ್ ಟವರ್ (ದೊಡ್ಡ ಗಡಿಯಾರು), ಮೇಸನ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವತ್ತ ಅಂಬಾವಿಲಾಸ ಅರಮನೆ ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ ಕೃಷ್ಣರಾಜೇಂದ್ರ ಆಸ್ಪತ್ರೆ ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್ ಕಾವೇರಿ ಗಾಂಧಿ ವೃತ್ತ ಹಾದು ಮತ್ತೆ ಪುರಭವನದ ಬಳಿ ಮುಕ್ತಾಯಗೊಂಡಿತು.












Click it and Unblock the Notifications