ಪ್ರೇಮ ತಿರಸ್ಕಾರ : ಮೈಸೂರಿನ ಮಹಿಳೆಗೆ ಚೂರಿ ಇರಿತ

ಚಾಕು ಇರಿತದಿಂದಾಗಿ ತೀವ್ರವಾಗಿ ಗಾಯಗೊಂಡಿರುವ 40 ವರ್ಷದ ಮಹಿಳೆ ಶಿವಮ್ಮ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮ್ಮನ ಕತ್ತು, ಹೊಟ್ಟೆ ಮತ್ತು ಕೈಗೆ ಚಾಕುವಿನಿಂದ ಇರಿದು 34 ವರ್ಷದ ಮಂಜುನಾಥ ಪರಾರಿಯಾಗಿದ್ದ. ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಧವೆ ಶಿವಮ್ಮನಿಗೆ ಒಬ್ಬ ಮಗನಿದ್ದಾನೆ. ಆಕೆ ಮೈಸೂರು ತಾಲೂಕಿನ ಮಾದವಗೆರೆಯ ನಿವಾಸಿ. ಮಂಜುನಾಥ ಕೂಡ ಅದೇ ಗ್ರಾಮದ ನಿವಾಸಿಯಾಗಿದ್ದು, ತನ್ನನ್ನು ವರಿಸಬೇಕೆಂದು ಶಿವಮ್ಮನನ್ನು ಪೀಡಿಸುತ್ತಲೇ ಇದ್ದ. ಪ್ರೇಮ ನಿವೇದನೆಯನ್ನು ಶಿವಮ್ಮ ನಿರಾಕರಿಸುತ್ತ ಬಂದಿದ್ದಳು. ಇಷ್ಟಾದರೂ ಬ್ರಹ್ಮಚಾರಿಯಾಗಿದ್ದ ಮಂಜುನಾಥ ತನ್ನ ಪ್ರಯತ್ನ ಬಿಟ್ಟಿರಲಿಲ್ಲ.
ದುರ್ಘಟನೆ ನಡೆದ ಶುಕ್ರವಾರದಂದು ಮಂಜುನಾಥ ಮತ್ತೆ ಶಿವಮ್ಮನ ಮನೆಗೆ ತೆರಳಿ ತನ್ನನ್ನು ವಿವಾಹವಾಗಬೇಕೆಂದು ಆಗ್ರಹಿಸಿದ್ದಾನೆ. ತನಗೊಬ್ಬ ಮಗನಿದ್ದಾನೆ, ಮದುವೆ ಸಾಧ್ಯವಿಲ್ಲವೆಂದು ಶಿವಮ್ಮ ತಿರಸ್ಕರಿಸಿದಾಗ ಚಾಕುವಿನಿಂದ ಇರಿದಿದ್ದಾನೆ ಮಂಜುನಾಥ. ಇದನ್ನು ಅಕ್ಕಪಕ್ಕದವರು ನೋಡಿದಾಗ ಮಂಜುನಾಥ ಅಲ್ಲಿಂದ ಪರಾರಿಯಾಗಿದ್ದಾನೆ.
ನೆರೆಹೊರೆಯವರು ಶಿವಮ್ಮನನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಪ್ರಾಣಾಪಾಯದಿಂದ ಪಾರಾಗಿಲ್ಲ ಎಂದು ತಿಳಿದುಬಂದಿದೆ. ಅಲ್ಲಿಂದ ಪರಾರಿಯಾಗಿ ವಿಷ ಸೇವಿಸಿದ್ದ ಮಂಜುನಾಥ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ದಾರಿಮಧ್ಯೆ ಅಸುನೀಗಿದ್ದಾನೆ. ಈ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ್ದಾಳೆಂದು ಮಂಜುನಾಥನ ತಾಯಿಯ ವಿರುದ್ಧ ಮೈಸೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications