Mysuru Dasara; ದಸರಾ ಜನರ ಹಬ್ಬ; ಸರ್ಕಾರಿ ಕಾರ್ಯಕ್ರಮವಲ್ಲ
ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಶುರುವಾಗಿದೆ, ಈಗಾಗಲೇ ಅದ್ದೂರಿ ದಸರಾ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂತಿಮ ಹಂತದ ಸಿದ್ಧತೆಗಳು ಬಾಕಿ ಇದ್ದು, ಈ ಬಾರಿ ದಸರಾ ಅದ್ದೂರಿಯಾಗಿ ನಡೆಸಲು ಸರ್ಕಾರ ಕೂಡ ನಿರ್ಧರಿಸಿದೆ. ಶುಕ್ರವಾರ ಮೈಸೂರಿಗೆ ಭೇಟಿ ನೀಡಿ ದಸರಾ ತಯಾರಿ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ , ದಸರಾ ಎನ್ನುವುದು ಸರ್ಕಾರಿ ಕಾರ್ಯಕ್ರಮಲ್ಲ ಅದು ಜನರ ಹಬ್ಬ ಎಂದರು.
ಮೈಸೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಆಚರಣೆ ಸರಕಾರದ ಕಾರ್ಯಕ್ರಮವಾಗಲು ಬಿಡಬಾರದು, ಇದು ಜನರ ಉತ್ಸವ ಆಗಬೇಕು, ದಸರಾ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಬಾರದು. ದಸರಾ ಜವಾಬ್ದಾರಿ ಇದ್ದವರನ್ನು ಹೊರತುಪಡಿಸಿ ಉಳಿದವರು ದಸರಾ ನೆಪದಲ್ಲಿ ಕಳ್ಳಾಟ ಆಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಎಲ್ಲಾ ನ್ಯಾಯಾಲಯಗಳಿಗಿಂತ ಜನತಾ ನ್ಯಾಯಾಲಯ ಮುಖ್ಯ, ಆತ್ಮಸಾಕ್ಷಿ ಮುಖ್ಯ ಎನ್ನುವ ಮಹಾತ್ಮಗಾಂಧಿಯವರ ಮಾತನ್ನು ಅಧಿಕಾರಿಗಳಿಗೆ ನೆನಪಿಸಿದ ಸಿದ್ದರಾಮಯ್ಯ, ನೆಪ ಹೇಳುವುದು, ಸುಳ್ಳು ಹೇಳುವುದನ್ನು ಅಧಿಕಾರಿಗಳು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಿಹಾಕಲು ಮತ್ತೊಂದು ಸುಳ್ಳು, ಅದನ್ನು ಸಮರ್ಥನೆ ಮಾಡಿಕೊಳ್ಳಲು ಇನ್ನೊಂದು ಸುಳ್ಳನ್ನು ಹೇಳುತ್ತಲೇ ಹೋಗಬೇಕಾಗುತ್ತದೆ. ಸುಳ್ಳು ಹೇಳುವ ಅಧಿಕಾರಿಗಳು ಒಂದಲ್ಲ ಒಂದು ದಿನ ಸಿಕ್ಕಿ ಬೀಳುತ್ತಾರೆ, ಇದು ನಿಮ್ಮ ವೃತ್ತಿ ಜೀವನಕ್ಕೆ ಒಳ್ಳೆಯದಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದರು.
ಪೊಲೀಸ್ ಇಲಾಖೆಗೆ ಖಡಕ್ ಸೂಚನೆ
ಕಾನೂನು ವ್ಯವಸ್ಥೆ ಹದಗೆಟ್ಟರೆ ರಾಜ್ಯದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಅಸಾಧ್ಯ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಅಪರಾಧಗಳು ನಡೆಯಬಾರು. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುವುದಕ್ಕೂ ಕಾನೂನು-ಸುವ್ಯವಸ್ಥೆಗೂ ನೇರವಾದ ಸಂಬಂಧವಿದೆ. ಈ ಬಗ್ಗೆ ಕಟ್ಟೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ, ಶಿಕ್ಷಣ, ಅನ್ನ, ನೀರು, ವಿದ್ಯುತ್, ರಸ್ತೆ ಸುರಕ್ಷತೆ ನನ್ನ ಪ್ರಥಮ ಆದ್ಯತೆ. ಅಧಿಕಾರಿಗಳು ಜಾತಿ ತಾರತಮ್ಯ ಮಾಡಬಾರದು, ಸಂವಿಧಾನಾತ್ಮಕವಾಗಿ, ಜಾತ್ಯಾತೀತವಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಸೇವೆ ಮಾಡಬೇಕು ಎಂದು ಹೇಳಿದರು.
ನಮ್ಮ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವುದು ಮೊದಲ ಆದ್ಯತೆಯಾಗಿರಬೇಕು. ಐದು ಗ್ಯಾರಂಟಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು, ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಅಭಿವೃದ್ಧಿ ಕೆಲಸಗಳಿಗೂ ಹಣ ಬಿಡುಗಡೆಯಾಗುತ್ತಿದೆ. ಅನುದಾನ ಬಿಡುಗಡೆ ಮಾಡಿದ್ದೇವೆ, ಬಜೆಟ್‌ನಲ್ಲಿ ಘೋಷಣೆಯಾಗಿರುವ ಕಾರ್ಯಕ್ರಮಗಳಿಗೆ ಘೋಷಣೆ ಮಾಡಿದ್ದಷ್ಟು ಹಣ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.












Click it and Unblock the Notifications