Mysuru Dasara 2022: ಮೈಸೂರು ದಸರಾ ; 110 ಕಿ. ಮೀ. ದೀಪಾಲಂಕಾರ
ಮೈಸೂರು, ಆಗಸ್ಟ್, 21: ಈ ಬಾರಿಯ ದಸರಾ ಮಹೋತ್ಸ ಹಿನ್ನೆಲೆ ಮೈಸೂರು ನಗರದ ಪ್ರಮುಖ ವೃತ್ತ, ರಸ್ತೆ ಸೇರಿದಂತೆ ಒಟ್ಟು 110 ಕಿಲೋ ಮೀಟರ್ ದೀಪಾಲಂಕಾರಕ್ಕೆ ಸಿದ್ಧತೆ ಆರಂಭಿಸಲಾಗಿದೆ. ಪ್ರತಿವರ್ಷ ದಸರಾದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅದು ದೀಪಾಲಂಕಾರ.
ಸಾವಿರಾರು ಪ್ರವಾಸಿರು, ಸ್ಥಳೀಯರು ಈ ದೃಶ್ಯದ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಮೈಸೂರಿನ ಹೃದಯ ಭಾಗದ ಪಾರಂಪರಿಕ ಕಟ್ಟಡಗಳು, ವಾಣಿಜ್ಯ ಸಂಕೀರ್ಣ, ವೃತ್ತಗಳು, ಮುಖ್ಯ ಜಂಕ್ಷನ್‌ಗಳನ್ನು ಒಳಗೊಂಡಂತೆ ವಿವಿಧೆಡೆ ದೀಪಾಲಂಕಾರ ಮಾಡಲಾಗುತ್ತದೆ.
ದಸರಾ ಸಮಯದಲ್ಲಿ ಸಂಜೆ 7 ಗಂಟೆ ಆಗುತ್ತಿದ್ದಂತೆ ವಾಹನಗಳಲ್ಲಿ ಮೈಸೂರು ನಗರದತ್ತ ಜನಸಾಗರವೇ ಆಗಮಿಸುತ್ತದೆ. ನಗರ ಪ್ರದಕ್ಷಿಣೆ ಮೂಲಕ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ನಗರದ ಜಯಚಾಮರಾಜ ಒಡೆಯರ್ ವೃತ್ತ, ಕೆ. ಆರ್. ವೃತ್ತ, ಆಯುರ್ವೇದಿಕ್ ವೃತ್ತ, ರೈಲು ನಿಲ್ದಾಣ, ಮಿಲೇನಿಯಂ ವೃತ್ತ, ಗನ್ ಹೌಸ್ ಸರ್ಕಲ್, ಏಕಲವ್ಯ ವೃತ್ತ, ಕುರುಬರಹಳ್ಳಿ ವೃತ್ತ ಸೇರಿದಂತೆ 20ಕ್ಕೂ ಹೆಚ್ಚು ವೃತ್ತಗಳನ್ನು ಅಲಂಕೃತಗೊಳಿಸಲಾಗುತ್ತದೆ.
''ದಸರಾ ದೀಪಾಲಂಕಾರ ಕಳೆದ ಐದು ವರ್ಷಗಳಿಂದ ಸಾರ್ವಜನಿಕರು, ಹೋಟೆಲ್ ಉದ್ಯಮಿಗಳು, ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಬಾರಿಯೂ ವಿಶೇಷ ಕಲ್ಪನೆಯೊಂದಿಗೆ ದೀಪಾಲಂಕಾರ ಆಯೋಜಿಸಲಾಗುತ್ತಿದೆ,'' ಎಂದು ಸೆಸ್ಕ್‌ನ ಜನರಲ್ ಮ್ಯಾನೇಜರ್ ಕೆ. ಎಂ. ಮುನಿಗೋಪಾಲರಾಜು ತಿಳಿಸಿದ್ದಾರೆ.

ದೀಪಾಲಂಕಾರ ವಿಸ್ತರಣೆಗೆ ಸಜ್ಜು
2020ರಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಕೇವಲ 50 ಕಿಲೋ ಮೀಟರ್ ದೀಪಾಲಂಕಾರವನ್ನು ಮಾಡಲಾಗಿತ್ತು. 2021ರ ದಸರಾ ಮಹೋತ್ಸವದಲ್ಲಿ 100 ಕಿಲೋ ಮೀಟರ್‌ಗೆ ದೀಪಾಲಂಕಾರವನ್ನು ವಿಸ್ತರಿಸಲಾಗಿತ್ತು. ಇದೀಗ ದಸರಾ ಉನ್ನತ ಸಮಿತಿ ಸಭೆಯಲ್ಲಿಅದ್ಧೂರಿ ದಸರಾ ಆಯೋಜಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಾರಿ 10 ಕಿಲೋ ಮೀಟರ್ ಹೆಚ್ಚುವರಿಯಾಗಿ ದೀಪಾಲಂಕಾರ ಮಾಡಲು ಸೆಸ್ಕ್ ನಿರ್ಧರಿಸಿದೆ. ಇದಕ್ಕಾಗಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶೇಷ ಯೋಜನೆ ಸಿದ್ಧಪಡಿಸಿದೆ.

ವಾಹನ ದಟ್ಟಣೆ ತಡೆಗೆ ಪೊಲೀಸರ ಹರಸಾಹ
ಕಳೆದ ಬಾರಿ ನಗರದ ಬೀದಿಗಳು, ಪ್ರಮುಖ ವಾಣಿಜ್ಯ ಕೇಂದ್ರಗಳು, ಪಾರಂಪರಿಕ ಕಟ್ಟಡಗಳನ್ನು ವಿಶೇಷವಾಗಿ ಕಂಗೊಳಿಸುವಂತೆ ಮಾಡಿದ ದೀಪಾಲಂಕಾರಕ್ಕೆ ಮೈಸೂರಿಗರು ಮಾರುಹೋಗಿದ್ದರು. ಸಂಜೆ ಆಯಿತೆಂದರೆ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದಕ್ಕಾಗಿ ಅರಮನೆ ಸುತ್ತಲಿನ ರಸ್ತೆಯಲ್ಲಿ ಏಕಮುಖ ಸಂಚಾರ ರಸ್ತೆಗಳಾಗಿ ಪರಿವರ್ತಿಸಲಾಯಿತು. ಆದರೂ ಈ ರಸ್ತೆಗಳಲ್ಲಿ ರಾತ್ರಿ 11ರ ವರೆಗೆ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿತ್ತು. ಈ ಬಾರಿಯ ದೀಪಾಲಂಕಾರಕ್ಕೆ ಮತ್ತಷ್ಟು ಮೆರುಗು ಬರಲಿದೆ ಎಂದು ಸೆಸ್ಕ್‌ನ ಜನರಲ್ ಮ್ಯಾನೇಜರ್ ಕೆ. ಎಂ. ಮುನಿಗೋಪಾಲರಾಜು ತಿಳಿಸಿದರು.

ವಿದ್ಯುತ್‌ಗೆ ಖರ್ಚಾಗಲಿರುವ ಒಟ್ಟು ಹಣ
ನಟ ಪುನೀತ್ ರಾಜ್‌ಕುಮಾರ್ ಅವರ ಅನಿಮೇಷನ್ ಮತ್ತು ಕಟೌಟ್, ಆ್ಯಕ್ಷನ್ ಭಂಗಿಗಳು ದೀಪಾಲಂಕಾರದ ಆಕರ್ಷಣೆಯ ಕೇಂದ್ರಬಿಂದು ಆಗಲಿದೆ. ಕೊಲ್ಕತ್ತಾದ ದುರ್ಗಾಪೂಜೆ ಸಂದರ್ಭದಲ್ಲಿ ಆಯೋಜಿಸುವ ಮಾದರಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಅಲ್ಲದೇ ಮಹಾರಾಜರ ಕಾಲದ ಆಚರಣೆಗಳ ಮಾದರಿಯಲ್ಲಿ ದೀಪಾಲಂಕಾರ ಮೂಡಿಬರಲಿದೆ. ನಿತ್ಯವೂ ದೀಪಾಲಂಕಾರಕ್ಕೆ ಕನಿಷ್ಠ 10,000 ದಿಂದ 12,000 ಯೂನಿಟ್ ವಿದ್ಯುತ್ ಖರ್ಚಾಗಲಿದೆ ಎಂದು ಸೆಸ್ಟ್ ಅಧಿಕಾರಿಗಳು ತಿಳಿಸಿದರು.

ಕೊರೊನಾದಿಂದ ಕಳೆ ಕಳೆದುಕೊಂಡಿದ್ದ ದಸರಾ
ಹಿರಿಯರು ಹಿಂದಿನ ಕಾಲದ ಭವ್ಯತೆಯ ನೆನಪಿನಲ್ಲಿ ದಸರಾವನ್ನು ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಪೂರ್ಣ ಪ್ರಮಾಣದ ದಸರಾವನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಅತಿವೃಷ್ಟಿ, ಬರಗಾಲ, ಕೊರೊನಾ ಸೇರಿದಂತೆ ನಾನಾ ಕಾರಣಗಳಿಂದ ಸರಳವಾಗಿ ದಸರಾ ನಡೆದಿದೆ. ಇದೀಗ ಹಲವು ವರ್ಷಗಳ ಬಳಿಕ ಯಾವುದೇ ಆತಂಕಗಳಿಲ್ಲದೆ ಪೂರ್ಣ ಪ್ರಮಾಣದಲ್ಲಿ ಅದ್ಧೂರಿಯ ನಾಡಹಬ್ಬ ಆಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ವ್ಯಾಪಾರ, ವಹಿವಾಟು, ಉದ್ಯಮಗಳು ನೆಲಕಚ್ಚಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಹಿ ನೆನಪುಗಳನ್ನು ದೂರ ಮಾಡಿ ದಸರಾ ಆಚರಣೆ ಮಾಡಲು ಸಿದ್ದರಾಗಿದ್ದಾರೆ.












Click it and Unblock the Notifications