ದಸರಾ ವಿಶೇಷ; ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳಲಿದೆ ಮೈಸೂರು!
ಮೈಸೂರು, ಸೆಪ್ಟೆಂಬರ್ 30: ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ನಗರಕ್ಕೆ ಮೆರಗು ತರುವ ವಿದ್ಯುದ್ದೀಪ ಅಲಂಕಾರದ ಕಾರ್ಯ ಈಗಾಗಲೇ ಆರಂಭವಾಗಿದೆ. ಪ್ರಮುಖ ವೃತ್ತ, ರಸ್ತೆ, ಕಟ್ಟಡಗಳು, ಮರಗಿಡ ಹೀಗೆ ವಿವಿಧ ಕಡೆಗಳಲ್ಲಿ ವಿದ್ಯುದ್ದೀಪ ಅಳವಡಿಸಲಾಗುತ್ತದೆ.
ಈ ವಿದ್ಯುದ್ದೀಪದ ಬೆಳಕಿನಲ್ಲಿ ನಾಡಜನತೆಗೆ ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಸ್ವಾತಂತ್ರ ಹೋರಾಟಗಾರರು, ದೇಶದ ನಾಯಕರು, ವಿಷ್ಣು, ಶ್ರೀಕೃಷ್ಣ ಸುತ್ತೂರು ರಾಜೇಂದ್ರ ಸ್ವಾಮೀಜಿ ಸೇರಿದಂತೆ ಹಲವರು ದರ್ಶನ ನೀಡಲಿದ್ದಾರೆ. ನಗರದ ಸೌಂದರ್ಯವನ್ನು ವಿದ್ಯುತ್ ದೀಪದ ಬೆಳಕಿನಲ್ಲಿ ಕಣ್ತುಂಬಿಕೊಳ್ಳಲು ರಾತ್ರಿ 7 ಗಂಟೆಯಿಂದ 9.30ರವರೆಗೆ ಅವಕಾಶವಿದೆ.
ದಸರಾ ವೇಳೆ ಮೈಸೂರು ನಗರ ತನ್ನ ಅಂದವನ್ನು ಹೆಚ್ಚಿಸಿಕೊಳ್ಳುವುದೇ ವಿದ್ಯುದ್ದೀಪದ ಅಲಂಕಾರದಿಂದ ಎಂದರೆ ತಪ್ಪಾಗಲಾರದು. ಹೀಗಾಗಿ ದಸರಾ ಆಚರಣೆ ಅದ್ಧೂರಿ ಇರಲಿ ಅಥವಾ ಸರಳವಾಗಿರಲಿ ದೀಪಾಲಂಕಾರಕ್ಕೆ ಮಾತ್ರ ಪ್ರತಿ ವರ್ಷವೂ ಒತ್ತು ನೀಡಲಾಗುತ್ತದೆ. ಈ ಬಾರಿ ನಗರದ 121 ರಸ್ತೆಗಳು, 80 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ.
ಹೀಗಾಗಿ ಜಗಮಗಿಸುವ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳುವ ಮೈಸೂರು ನಗರವನ್ನು ನೋಡಲು ಪ್ರವಾಸಿಗರ ದಂಡು ದೌಡಾಯಿಸುತ್ತದೆ. ಈ ಬಾರಿಯ ದಸರಾಕ್ಕೆ ಅಕ್ಟೋಬರ್ 7ರಂದು ಚಾಲನೆ ಸಿಗಲಿದೆ. ಅಕ್ಟೋಬರ್ 15ರಂದು ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದೆ. ಅಕ್ಟೋಬರ್ 7ರಿಂದ 17ರವರೆಗೆ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಬಹುದಾಗಿದೆ.

ಎಂದಿನಂತೆಯೇ ವಿದ್ಯುದ್ದೀಪಾಲಂಕಾರ
ಈ ಬಾರಿಯೂ ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಮೈಸೂರು ದಸರಾವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಆದರೆ ವಿದ್ಯುದ್ದೀಪ ಅಲಂಕಾರ ಮಾತ್ರ ಎಂದಿನಂತೆಯೇ ಇರಲಿದೆ. ಹೀಗಾಗಿಯೇ ನಗರದ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಗಳ ಜೋಡಣೆ ಕಾರ್ಯ ಹಾಗೂ ಹೊಸ ವಿನ್ಯಾಸದ ಪ್ರತಿಕೃತಿ ನಿರ್ಮಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಒಂದೆಡೆ ಅರಮನೆಗೆ ಗಜಪಡೆ ಪ್ರವೇಶಿಸಿದ ಬಳಿಕ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಗೋಡೆಗಳಿಗೆ ಬಣ್ಣ ಬಳಿಯುವ, ವಿದ್ಯುತ್ ಬಲ್ಬ್ ಬದಲಾಯಿಸುವುದು, ಹೂದೋಟ ಸೇರಿ ವಿವಿಧ ಕೆಲಸಗಳು ಆರಂಭಗೊಂಡಿದ್ದು, ವಾರದಲ್ಲಿ ಮುಕ್ತಾಯವಾಗಲಿವೆ.

ನಗರದ 100 ಕಿ.ಮೀ. ವ್ಯಾಪ್ತಿಯಲ್ಲಿ ಅಲಂಕಾರ
ಮೈಸೂರು ಅರಮನೆ ಸುತ್ತಲಿನ ರಸ್ತೆ, ರಾಜಮಾರ್ಗ, ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡುವ ಕಾರ್ಯ ಇದೀಗ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಇದು ಕೂಡ ಪೂರ್ಣಗೊಳ್ಳಲಿದೆ.
ಸದ್ಯ ಈ ಬಾರಿಯ ದಸರಾದಲ್ಲಿ ವಿದ್ಯುದ್ದೀಪ ಅಲಂಕಾರಕ್ಕೆ ಹೆಚ್ಚಿನ ಒತ್ತು ನೀಡಿರುವುದು ಕಂಡು ಬಂದಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ವೃತ್ತ ರಸ್ತೆಗಳಲ್ಲಿ ಅಲಂಕಾರ ಮಾಡಲಾಗುತ್ತಿದೆ. ಬರೋಬ್ಬರಿ ನಗರದ ಸುಮಾರು 100 ಕಿ. ಮೀ. ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲು ನಿರ್ಧರಿಸಿರುವುದು ವಿಶೇಷವಾಗಿದೆ. ನಗರದ 121 ರಸ್ತೆಗಳು, 80 ವೃತ್ತಗಳಿಗೆ ದೀಪಾಲಂಕಾರ ಮಾಡುವುದಲ್ಲದೆ, ಚಾಮುಂಡೇಶ್ವರಿ, ಮೈಸೂರು ಮಹಾರಾಜರು, ಕೊರೊನಾ ಲಸಿಕೆ ಕುರಿತಂತೆ ಜಾಗೃತಿ ಮೂಡಿಸುವ ಹೊಸ ವಿನ್ಯಾಸದ ಪ್ರತಿಕೃತಿಗಳಲ್ಲದೆ, ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರ ಪ್ರತಿಕೃತಿ ನಿರ್ಮಿಸಲಾಗುತ್ತಿದೆ.

ಗಮನ ಸೆಳೆಯಲಿದೆ ವಿದ್ಯುದ್ದೀಪಾಲಂಕಾರ
75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಅಂಗವಾಗಿ ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಭಾರತದ ಭೂಪಟ, ಸ್ವಾತಂತ್ರ ಹೋರಾಟಗಾರರು, ದೇಶದ ನಾಯಕರು, ಮೈಸೂರು ಅರಮನೆ, ವಿಷ್ಣು, ಶ್ರೀಕೃಷ್ಣ ರಥ, ಸುತ್ತೂರು ರಾಜೇಂದ್ರ ಸ್ವಾಮೀಜಿ ಅವರ ಪ್ರತಿಕೃತಿಯಲ್ಲದೆ, ನಗರದ ಎಲ್‌ಐಸಿ ಕಚೇರಿ ವೃತ್ತದಲ್ಲಿ ವಿವಿಧ ಪ್ರಾಣಿಗಳ ಕಲಾಕೃತಿಗಳಲ್ಲದೆ, ಬಹು ಮುಖ್ಯವಾಗಿ ಚಾಮುಂಡಿಬೆಟ್ಟದಲ್ಲಿ ದಸರಾಗೆ ಜನತೆಯನ್ನು ಸ್ವಾಗತಿಸುವ ವಿದ್ಯುದ್ದೀಪಗಳಿಂದ ನಿರ್ಮಿಸಿದ ಸುಸ್ವಾಗತದ ಫಲಕ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಆಕರ್ಷಿಸಲಿದ್ದು, ಇದರ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ.

ಅಕ್ಟೋಬರ್ 7ರಂದು ದೀಪಾಲಂಕಾರ ಉದ್ಘಾಟನೆ
ಮೈಸೂರು ನಗರಕ್ಕೊಂದು ಸುತ್ತು ಹೊಡೆದರೆ ಬೆಂಗಳೂರು ರಸ್ತೆ, ಅಂಬೇಡ್ಕರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಹಾರ್ಡಿಂಜ್ ವೃತ್ತ, ಕೆ. ಆರ್. ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಉಳಿದ ರಸ್ತೆ ಮತ್ತು ವೃತ್ತಗಳಲ್ಲಿ ದೀಪಗಳ ಅಲಂಕಾರ ಮಾಡಲು ರಸ್ತೆ ಎರಡು ಬದಿಯಲ್ಲಿ ಮರದ ಕಂಬಗಳನ್ನು ನೆಡಲಾಗುತ್ತಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ದೀಪಾಲಂಕಾರದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅನಗತ್ಯವಾಗಿ ವಿದ್ಯುತ್ ಪೋಲಾಗದಂತೆ ತಡೆಯಲು ರಾಜ ಮಾರ್ಗದಲ್ಲಿ ಅರಮನೆಗೆ ಬಳಸಿರುವ ಬಲ್ಬ್‌ಗಳನ್ನು ಬಳಸಿ, ಉಳಿದೆಲ್ಲಾ ರಸ್ತೆಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಒಂದು ಲಕ್ಷದ ಇಪ್ಪತೈದು ಸಾವಿರ ಯೂನಿಟ್ ವಿದ್ಯುತ್ ಖರ್ಚಾಗಲಿದೆ ಎಂದು ಹೇಳಲಾಗಿದೆ.

ರಾತ್ರಿ 7 ರಿಂದ 9.30ರವರೆಗೆ ಮೈಸೂರು ಜಗಮಗ
ಒಟ್ಟಾರೆಯಾಗಿ ಹೇಳಬೇಕೆಂದರೆ ದಸರಾ ಉದ್ಘಾಟನಾ ದಿನ (ನವರಾತ್ರಿ ಆರಂಭ) ಹತ್ತಿರವಾಗುತ್ತಿರುವುದರಿಂದ ಮತ್ತು ಅಕ್ಟೋಬರ್ 7ರಂದು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ದಸರಾ ದೀಪಾಲಂಕಾರ ಉದ್ಘಾಟನೆಗೊಳ್ಳಲಿರುವುದರಿಂದ ವಿದ್ಯುದ್ದೀಪ ಅಳವಡಿಸುವ ಕಾರ್ಯವನ್ನು ಮಾಡಿ ಮುಗಿಸಲೇ ಬೇಕಾಗಿರುವುದರಿಂದಾಗಿ ರಾತ್ರಿ ಹಗಲೆನ್ನದೆ ಕೆಲಸಗಾರರು ವಿದ್ಯುದ್ದೀಪ ಅಳವಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಕ್ಟೋಬರ್ 7ರಿಂದ 17ರವರೆಗೆ ಇಡೀ ಮೈಸೂರು ವಿದ್ಯುದ್ದೀಪದ ಬೆಳಕಿನಲ್ಲಿ ಪ್ರಜ್ವಲಿಸಲಿದ್ದು, ಆ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ರಾತ್ರಿ 7 ಗಂಟೆಯಿಂದ 9.30ರವರೆಗೆ ಅವಕಾಶ ಮಾಡಿಕೊಡಲಾಗಿದೆ












Click it and Unblock the Notifications