Darshan Gang: ದರ್ಶನ್ ಗ್ಯಾಂಗ್‌ನ ಮೂವರು ಮೈಸೂರು ಜೈಲಗೆ ಶಿಫ್ಟ್! ಜೈಲು ಸೂಪರಿಡೆಂಟ್ ಹೇಳಿದ್ದೇನು?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಮತ್ತು ಸಹಚರರಿಗೆ ಹೊಸ ಸಂಕಷ್ಟ ಶುರುವಾಗಿದೆ. ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಹಿನ್ನಲೆಯಲ್ಲೇ ದರ್ಶನ್ ಮತ್ತು ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಆದೇಶ ನೀಡಿದೆ. ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಿದ್ದು, ಮೈಸೂರು ಕಾರಾಗೃಹಕ್ಕೂ ಮೂವರು ಆರೋಪಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ.
ಈ ಮೊದಲೇ ಮೂವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ3 ಆರೋಪಿ ಪವನ್, ಎ4 ಆರೋಪಿ ರಾಘವೇಂದ್ರ, ಎ5 ಆರೋಪಿ ನಂದೀಶ್ ಸಹ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಇದೀಗ ದರ್ಶನ್ ಅವರ ಒಂದಷ್ಟು ಫೋಟೋಗಳು ವೈರಲ್ ಆಗುತ್ತಿದ್ದಂತೆ ಈ ಮೂವರನ್ನು ಮೈಸೂರು ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.

ಮೈಸೂರು ಕಾರಾಗೃಹದಲ್ಲಿ 20 ಬ್ಯಾರಕ್‌ಗಳಿದ್ದು, ಒಟ್ಟು 850 ಕೈದಿಗಳು ಇದ್ದಾರೆ. ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಮೈಸೂರಿಗೆ ಬರುತ್ತಿರುವುದರಿಂದ. ಜೈಲಿನ ಅಧಿಕಾರಿಗಳು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಜೈಲು ಸೂಪರಿಡೆಂಟ್ ಹೇಳಿದ್ದೇನು?
ರೇಣುಕಾಸ್ವಾಮಿ ಹತ್ಯೆ ಆರೋಪಿಗಳಲ್ಲಿ ಮೂವರನ್ನು ಮೈಸೂರು ಕಾರಾಗೃಹಕ್ಕೆ ಕಳುಹಿಸಿಕೊಡಲಾಗುತ್ತಿದೆ. ಯಾವಾಗ ಬರುತ್ತಾರೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕಡಿಮೆ ಖೈದಿಗಳು ಇರುವ ಬ್ಯಾರಕ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನು ಇರಿಸಲಾಗುವುದು, ಜೊತೆಗೆ ಸಿಸಿಟಿವಿ ಕಣ್ಗಾವಲು ಕೂಡ ಇರಲಿದೆ ಎಂದು ಜೈಲು ಸೂಪರಿಡೆಂಟ್ ರಮೇಶ್ ತಿಳಿಸಿದ್ದಾರೆ.
ಮೈಸೂರು ಕಾರಾಗೃಹವು ಪ್ರಸಿದ್ಧ ಜೈಲುಗಳಲ್ಲಿ ಒಂದಾಗಿದೆ. ಅಶೋಕ ರಸ್ತೆಯಲ್ಲಿ 21 ಎಕರೆ ವಿಶಾಲವಾಗಿ ಹರಡಿಕೊಂಡಿದೆ. 1862 ರಲ್ಲಿ ಮೈಸೂರು ಜೈಲು ಪ್ರಾರಂಭಿಸಲಾಯಿತು. ಹಲವು ಪ್ರಮುಖ ಆರೋಪಿಗಳು, ಅಪರಾಧಿಗಳು ಇಲ್ಲಿ ಇದ್ದಾರೆ.
ಫೋಟೊ, ವಿಡಿಯೋ ತಂದ ಸಂಕಷ್ಟ
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದ್ದು ಅವರಿಗೆ ಮತ್ತಷ್ಟು ಸಂಕಷ್ಟ ತಂದಿದೆ. ಅದಾದ ಬಳಿಕ ತಮ್ಮ ಸೆಲ್‌ನಿಂದಲೇ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು ಕೂಡ ಬಹಿರಂಗವಾಗಿದೆ. ಈ ಬೆನ್ನಲ್ಲೇ ನಟ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ನಿರ್ಧರಿಸಿಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ 7 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.












Click it and Unblock the Notifications