ಮೈಸೂರು ನಗರ ಪಾಲಿಕೆ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜು ಈಗ ದರ್ಶನ್ ಜೊತೆ ಜೈಲುಪಾಲು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಕೊಲೆ ಆರೋಪಕ್ಕೆ ದಿನಕ್ಕೊಂದು ತಿರುವು, ಮಹತ್ತರ ಸಾಕ್ಷಿ ಲಭ್ಯವಾಗುತ್ತಿದೆ. ಈ ನಡುವೆ ಮತ್ತೊಬ್ಬ ಆರೋಪಿ ನಾಗರಾಜು ಆಲಿಯಾಸ್ ನಾಗ ಬಂಧನವಾಗಿದ್ದು, ಈತ ಮೈಸೂರು ನಗರಪಾಲಿಕೆ ಟಿಕೆಟ್ ಆಕ್ಷಾಂಕ್ಷಿಯಾಗಿದ್ದ ಎಂಬ ಅಂಶವೂ ಇದೀಗ ಬಯಲಾಗಿದೆ.
ನಾಗರಾಜು ಅಪ್ಪಟ್ಟ ದರ್ಶನ್ ಅಭಿಮಾನಿ. ಮೂಲತಃ ಈತ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನವನು. ಆದರೆ, ಪ್ರಸ್ತುತ ಮೈಸೂರಿನ ಟಿ.ಕೆ.ಲೇಔಟ್‌ನಲ್ಲಿ ವಾಸವಿದ್ದಾನೆ. ನಾಗರಾಜು ದರ್ಶನ್ ಅಭಿಮಾನಿಗಳಿಗೆ ಸಂಪರ್ಕ ಸೇತುವೆಯಾಗಿದ್ದನು. ಮೈಸೂರು ನಗರಪಾಲಿಕೆ ವಾರ್ಡ್ ನಂ. 21 ರಿಂದ ಈ ಬಾರಿ ಸ್ಪರ್ಧಿಸಲು ತಯಾರಿ ನಡೆಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ
ದರ್ಶನ್ ಮೈಸೂರಿಗೆ ಬಂದರೆ ನಾಗರಾಜು ಸಕಲ ವ್ಯವಸ್ಥೆ ಮಾಡುತ್ತಿದ್ದನು. ಹಾಗಾಗಿಯೇ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ದರ್ಶನ್ ಅವರ ಮೂಲಕ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಸಿದ್ಧತೆ ನಡೆಸಿದ್ದನು. ಈ ಸಂಬಂಧ ಸ್ಥಳೀಯ ಮುಖಂಡರು ಮತ್ತು ನಾಯಕರೊಂದಿಗೆ ಒಡನಾಟ ಇರಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ.
ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನಾಗರಾಜು, ದರ್ಶನ್ ಸ್ನೇಹಿತರ ಮೂಲಕ ದರ್ಶನ್ ಆಪ್ತ ವಲಯಕ್ಕೆ ಸೇರಿಕೊಂಡು ಅವರ ಎಲ್ಲ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ. ಇದರೊಂದಿಗೆ ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿ ಆಯ್ಕೆಯಾಗಿದ್ದ.
ನಾಗರಾಜು ಮೈಸೂರು ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ತೋಟದ ಮನೆಯ ನಿರ್ವಹಣೆ ಮಾಡುತ್ತಿದ್ದ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಳೆದ 15 ವರ್ಷಗಳಿಂದಲೂ ದರ್ಶನ್ ಜತೆಯಲ್ಲೇ ಇರುವ ನಾಗರಾಜ್, ನಟ ದರ್ಶನ್ ಅವರ ಊಟ, ತಿಂಡಿ, ವಾಸ್ತವ್ಯ, ಪ್ರವಾಸ, ವೈಯಕ್ತಿಕ ವಿಚಾರಗಳೆಲ್ಲವನ್ನೂ ನೋಡಿಕೊಳ್ಳುತ್ತಿದ್ದ ಎಂಬ ಅಂಶವೂ ಬಯಲಾಗಿದೆ.












Click it and Unblock the Notifications