ಮೈಸೂರಿನಲ್ಲಿ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದು ಪ್ರಾಣಬಿಟ್ಟ ಹಸು
ಮೈಸೂರು, ಡಿಸೆಂಬರ್ 5: ಕಬ್ಬಿಣವನ್ನು ಹೊತ್ತೊಯ್ಯತ್ತಿದ್ದ ಗೂಡ್ಸ್ ಆಟೋಗೆ ಹಸು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮಧ್ಯದಲ್ಲೇ ಹಸು ಒದ್ದಾಡಿ ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಬನ್ನೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ರಸ್ತೆ ದಾಟುತ್ತಿದ್ದ ಹಸು ಗೂಡ್ಸ್ ಆಟೋಗೆ ಅಡ್ಡ ಬಂದಿದೆ. ಈ ವೇಳೆ ಆಟೋದಲ್ಲಿದ್ದ ಕಬ್ಬಿಣದ ರಾಡ್ ಹಸುಗೆ ಚುಚ್ಚಿ ಒದ್ದಾಡಿ ಪ್ರಾಣ ಬಿಟ್ಟಿದೆ. ಸ್ಥಳಕ್ಕೆ ಆಲನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಯಿಗೆ ರಾಡಿನಿಂದ ಹಲ್ಲೆ
ಮತ್ತೊಂದು ಪ್ರಕರಣದಲ್ಲಿ ಸಾಕು ನಾಯಿಯೊಂದು ಕಚ್ಚಿದ್ದಕ್ಕೆ ಆಕ್ರೋಶಗೊಂಡ ಯುವಕರಿಬ್ಬರು ಕಬ್ಬಿಣದ ರಾಡಿನಿಂದ ನಾಯಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಲೋಕನಾಯಕ ನಗರದಲ್ಲಿ ನಡೆದಿದೆ.
ನಂಜಪ್ಪ ಎಂಬಾತ ಡಿಸೆಂಬರ್ 2 ರಂದು ಸಂಜೆ ಸಾಕು ನಾಯಿಯನ್ನು ಮನೆ ಮುಂಭಾಗ ಬಿಟ್ಟಿದ್ದಾಗ ಸಂತೋಷ್ ಮತ್ತು ಗೌತಮ್ ಎಂಬುವವರು ಏಕಾಏಕಿ ಬಂದು ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ. ಗಂಭೀರವಾಗಿ ಪೆಟ್ಟು ತಿಂದಿದ್ದ ನಾಯಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಸಂತೋಷ್ ಮತ್ತು ಗೌತಮ್ ಪಕ್ಕದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ಕಚ್ಚಿತ್ತು. ಇದರಿಂದ ಬೇಸತ್ತು ಈ ನಾಯಿಗೆ ಹೊಡೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications