Pratap Simha: ಪ್ರತಾಪ್ ಸಿಂಹ ಕುರಿತಾದ 'ಕತ್ತಲೆ ಜಗತ್ತು' ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ
ಮಾಜಿ ಸಂಸದ ಪ್ರತಾಪ್ ಸಿಂಹ ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ಬರೆಯುತ್ತಿದ್ದ ಬೆತ್ತಲೆ ಜಗತ್ತು ಅಂಕಣ ಭಾರಿ ಜನಪ್ರಿಯವಾಗಿತ್ತು. ಇದೀಗ ಪ್ರತಾಪ್ ಸಿಂಹ ಅವರ ಕುರಿತಂತೆಯೇ ಪ್ರವೀಣ್ ಕುಮಾರ್ ಮಾವಿನಕಾಡು 'ಕತ್ತಲೆ ಜಗತ್ತು' ಎನ್ನುವ ಪುಸ್ತಕ ಬರೆದಿದ್ದು, ಈ ಪುಸ್ತಕ ಬಿಡುಗಡೆ ಮಾಡದಂತೆ ಮಾಜಿ ಸಂಸದ ಪ್ರತಾಪಸಿಂಹ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಿದ ಬಳಿಕ ಮೈಸೂರಿನಲ್ಲಿ ಏರ್ಪಡಿಸಲಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಪ್ರವೀಣ್ ಕುಮಾರ್ ಮಾವಿನಕಾಡು ಬರೆದಿರುವ ಪುಸ್ತಕದಲ್ಲಿ ತಮ್ಮ ಬಗ್ಗೆ ಅಸಭ್ಯ ಮತ್ತು ಮಾನಹಾನಿಕರ ವಿಷಯಗಳನ್ನು ಬರೆದಿದ್ದು, ಪುಸ್ತಕ ಬಿಡುಗಡೆ, ಮಾರಾಟ ಮತ್ತು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರತಾಪ್ ಸಿಂಹ ಮನವಿಯನ್ನು ಪುರಸ್ಕರಿಸಿರುವ ಬೆಂಗಳೂರು ಗ್ರಾಮಾಂತರ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್ ತಪ್ಪಲು ಕಾರಣವಾದ ಘಾತಕ ಕಥೆಗಳು ಶೀರ್ಷಿಕೆ ಹೊಂದಿದ್ದ ಕಾರಣ ಸಂಸದ ಪ್ರತಾಪ್ ಸಿಂಹ ಅವರು ಕೃತಿ ಬಿಡುಗಡೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಪುಸ್ತಕ ಬಿಡುಗಡೆ ಸಮಾರಂಭ ರದ್ದಾಗಿತ್ತು. ಆದರೆ, ಇದರ ಬದಲಾಗಿ ಶನಿವಾರ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ
ಮೈಸೂರು ನಗರದ ಇನ್ಸ್‌ಟಿಟ್ಯೂಟ್ ಎಂಜಿನಿಯರ್ಸ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್ ಕುಮಾರ್, ಇದೇ ಪ್ರತಾಪ್ ಸಿಂಹ 'ಬೆತ್ತಲೆ ಜಗತ್ತು' ಎನ್ನುವ ಅಂಕಣ ಬರೆದು ರಾಜಕಾರಣಿಗಳೆಲ್ಲರ ಜನ್ಮವನ್ನೂ ಜಾಲಾಡಿದಾಗ ನಾವೇ ಅವರನ್ನು ಹೊತ್ತು ಮೆರೆಸಿದ್ದೆವು. ಆಗ ಅವರ ಮೇಲೆ ಯಾರೂ ತಡೆಯಾಜ್ಞೆ ತಂದಿರಲಿಲ್ಲ. ಆದರೆ, ಅವರ ಕುರಿತ ಹಲವಾರು ವಿಷಯಗಳಿರುವ 'ಕತ್ತಲೆ ಜಗತ್ತು' ಪುಸ್ತಕ ಹೊರಬಂದಾಗ ತಡೆಯಾಜ್ಞೆ ತರುತ್ತಾರೆ. ಬರಹಗಾರರಿಗೆ ಅಭಿವ್ಯಕ್ತಿ ಸ್ವಾತಂತ್ರ ಎಲ್ಲಿದೆ ಎಂದರು.
ಸಂಸತ್‌ನ ಒಳಗೆ ಸ್ಮೋಕ್ ಬಾಂಬ್ ಸಿಡಿಸಿದವರಿಗೆ ಒಳಗೆ ಪ್ರವೇಶಿಸಲು ಪಾಸ್ ನೀಡುವ ಮೂಲಕ ನರೇಂದ್ರ ಮೋದಿ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸವನ್ನು ಪ್ರತಾಪ್ ಸಿಂಹ ಮಾಡಿದ್ದಾರೆ. ಸ್ಮೋಕ್ ಬಾಂಬ್ ಪ್ರಕರಣದಲ್ಲಿ ಪಾಸ್ ತೆಗೆದುಕೊಂಡವರಿಗೂ ಮತ್ತು ಪ್ರತಾಪ್ ಸಿಂಹ ಅವರಿಗೆ ಯಾವ ಸಂಬಂಧ ಇತ್ತು ಎನ್ನುವು ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದರು.
ಜೆಎಲ್‌ಬಿ ರಸ್ತೆಯಲ್ಲಿರುವ ದಿ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ "ಮಾಧ್ಯಮ ಸ್ವಾತಂತ್ರ್ಯ ಮತ್ತು ಬರಹಗಾರರ ಹಕ್ಕುಗಳು" ಕುರಿತ ಚಿಂತನ ಮಂಥನ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.












Click it and Unblock the Notifications