ಮಕ್ಕಳು ಓಡಾಡುವುದನ್ನು ನೋಡೋ ಭಾಗ್ಯ ದಂಪತಿಗಿಲ್ಲ!

ಮೈಸೂರು, ಫೆಬ್ರವರಿ 19: ಹೆತ್ತವರು ಮಕ್ಕಳ ಲಾಲನೆ ಪೋಷಣೆ ಮಾಡುತ್ತಾ ಅವರ ಸುಖವೇ ತಮ್ಮ ಸುಖವೆಂಬಂತೆ ಅವರು ಬೆಳೆದು ದೊಡ್ಡದಾಗುವುದನ್ನು ನೋಡುತ್ತಾ ಖುಷಿಪಡುತ್ತಾರೆ. ಆದರೆ ಎಚ್.ಡಿ.ಕೋಟೆ ತಾಲೂಕು ಸರಗೂರು ಹೋಬಳಿಯ ಮುಳ್ಳೂರು ಗ್ರಾಮದ ನಿವಾಸಿ ಸಿದ್ದಾಚಾರಿ ಮತ್ತು ಪತ್ನಿ ನಾಗಮ್ಮ ದಂಪತಿಗಳಿಗೆ ಆ ಭಾಗ್ಯವೇ ಇಲ್ಲದಾಗಿದೆ. ಹಾಸಿಗೆ ಹಿಡಿದು ಮಲಗಿರುವ ಮಕ್ಕಳನ್ನು ನೋಡುತ್ತಾ ಕಣ್ಣೀರಿಡುವುದೇ ಅವರ ನಿತ್ಯದ ಕಾಯಕವಾಗಿದೆ.

ಹಾಗೆ ನೋಡಿದರೆ ಸಂಬಂಧಿಕರೇ ಆಗಿದ್ದ ಸಿದ್ದಾಚಾರಿ ಮತ್ತು ನಾಗಮ್ಮ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಆರತಿಗೊಂದು ಕೀರ್ತಿಗೊಂದು ಎಂಬಂತೆ ಇಬ್ಬರು ಮಕ್ಕಳಿದ್ದರು. ಪುಟ್ಟ ಸಂಸಾರದೊಂದಿಗೆ ಬಾಳ ಬಂಡಿ ಸಾಗುತ್ತಿತ್ತು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರೂ ನೆಮ್ಮದಿಯಾಗಿಯೇ ಇದ್ದರು. ಮಕ್ಕಳಿಬ್ಬರು ಬೆಳೆದು ದೊಡ್ಡರಾಗುವುದನ್ನು ನೋಡುತ್ತಾ ಖುಷಿಪಡಬೇಕಾಗಿತ್ತು. ಆದರೆ ಅದ್ಯಾವುದೂ ಅವರ ಪಾಲಿಗೆ ಆಗಲೇ ಇಲ್ಲ.

ಮಗಳು ಹಾಸಿಗೆ ಹಿಡಿದಳು

ಮಗಳು ಹಾಸಿಗೆ ಹಿಡಿದಳು

ಹಿರಿಯ ಮಗಳು ಸುನೀತಾ ಹುಟ್ಟಿದ ಒಂದು ವರ್ಷದ ತನಕ ಚೆನ್ನಾಗಿಯೇ ಇದ್ದಳು. ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಕಾಣಿಸತೊಡಗಿತು. ಆಕೆ ಮೆದುಳಿನ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಬಹುವಿಧದ ಅಂಗವಿಕಲೆಯಾದಳು. ಇದರಿಂದ ಗಾಬರಿಯಾದ ತಂದೆ ಸಿದ್ದಾಚಾರಿ, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಿದರು. ಆಕೆ ಗುಣಮುಖಳಾಗಿ ಬಾಯಿಂದ ಅಪ್ಪ ಎಂದು ಕರೆಯುತ್ತಾಳೆ. ಪುಟ್ಟ-ಪುಟ್ಟ ಹೆಜ್ಜೆಯನ್ನಿಟ್ಟು ಓಡಿ ಬಂದು ತನ್ನನ್ನು ತಬ್ಬಿ ಮುದ್ದಾಡುತ್ತಾಳೆಂದು ಕನಸು ಕಂಡಿದ್ದ ಸಿದ್ದಾಚಾರಿಗೆ ಮಗಳು ಗುಣಮುಖಳಾಗದೇ ಕೈಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಾಗ ಜಂಘಾಬಲವೇ ಹುದುಗಿ ಹೋಯಿತು.

ಮಗನೂ ಹಾಸಿಗೆ ಹಿಡಿದನು

ಮಗನೂ ಹಾಸಿಗೆ ಹಿಡಿದನು

ಅನ್ಯ ಮಾರ್ಗವಿಲ್ಲದೆ ಸ್ವಾಧೀನ ಕಳೆದುಕೊಂಡ ಮಗಳ ಆರೈಕೆಯಲ್ಲಿಯೇ ಗಂಡ-ಹೆಂಡತಿ ಜೀವನ ಸಾಗಿಸತೊಡಗಿದರು. ಈ ನಡುವೆ ಮಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ತಾವು ಕೂಲಿ ಮಾಡಿ ಸಂಪಾದಿಸಿದ ಒಂದಷ್ಟು ಹಣವನ್ನು ಖರ್ಚು ಮಾಡಿದರು. ಆದರೆ ಪ್ರಯೋಜನ ಕಾಣಲಿಲ್ಲ. ಕಳೆದ 17 ವರ್ಷಗಳಿಂದ ಸುನೀತಾ ಅಂಗವಿಕಲೆಯಾಗಿ ಹೆತ್ತವರ ಆರೈಕೆಯಲ್ಲಿಯೇ ಬದುಕುತ್ತಿದ್ದಾಳೆ. ಇನ್ನೊಂದೆಡೆ ಇವರ ಮಗನ ಕಥೆಯೂ ಇದಕ್ಕೆ ಹೊರತಲ್ಲ. ಮಗ ಸುನೀಲ್ ಕುಮಾರನಿಗೆ ಈಗ ಹದಿನೈದು ವರ್ಷ. ಆತ ಹುಟ್ಟಿ ಮೂರು ತಿಂಗಳ ಕಾಲ ಎಲ್ಲ ಮಕ್ಕಳಂತೆಯೇ ಇದ್ದನು. ಆದರೆ ಇದ್ದಕ್ಕಿದ್ದಂತೆಯೇ ಅಕ್ಕ ಸುನೀತಾಳಂತೆ ಆತನೂ ಮೆದುಳಿನ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದನು. ತಮ್ಮ ಕಣ್ಣಮುಂದೆ ಓಡಾಡುತ್ತಾ ಇರಬೇಕಾಗಿದ್ದ ಮಕ್ಕಳು ಹಾಸಿಗೆ ಹಿಡಿದು ಮಲಗಿದರೆ, ಆ ದಂಪತಿಯ ಮಾನಸಿಕ ಸ್ಥಿತಿ ಹೇಗಾಗಬೇಡ. ಆದರೆ ಎಲ್ಲ ನೋವು, ಕಷ್ಟಗಳನ್ನು ನುಂಗಿ ದುಡಿಯುತ್ತಾ ಮಕ್ಕಳ ಪಾಲನೆ ಮಾಡುತ್ತಾ ಬದುಕುತ್ತಿದ್ದಾರೆ.

ಮಕ್ಕಳಿಬ್ಬರಿಗೆ ಹಾಸಿಗೆಯೇ ಬದುಕು

ಮಕ್ಕಳಿಬ್ಬರಿಗೆ ಹಾಸಿಗೆಯೇ ಬದುಕು

ಎದೆ ಮಟ್ಟ ಬೆಳೆದು ಅಪ್ಪ ಅಮ್ಮನಿಗೆ ಹೆಗಲಾಗಬೇಕಾಗಿದ್ದ ಮಕ್ಕಳು ಇವತ್ತು ನಿಸ್ತೇಜರಾಗಿ ಹಾಸಿಗೆಯಲ್ಲಿ ಮಲಗಿ ಹೆತ್ತವರ ಲಾಲನೆ ಪೋಷಣೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ ಎಂದರೆ ಪರಿಸ್ಥಿತಿ ಹೇಗಿರಬಹುದು? ಈಗಾಗಲೇ ತಾವು ದುಡಿದ ಸಂಪಾದನೆಯನ್ನೆಲ್ಲ ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಖರ್ಚು ಮಾಡಿದ್ದಾರೆ. ಇದುವರೆಗೆ ಸುಮಾರು ಏಳೆಂಟು ಲಕ್ಷ ರೂಪಾಯಿ ಖರ್ಚು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ಚಿಕ್ಕದೇವಮ್ಮ ದೇವಸ್ಥಾನಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದಾಗ ಅವರ ಕುಟುಂಬದ ಪರಿಸ್ಥಿತಿ ನೋಡಿ ಎರಡು ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದರಂತೆ.ಈ ನಡುವೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಶ್ರೀನಿವಾಸ ಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮನೆ ಬಾಗಿಲಿಗೆ ಹೋಗಿ ಬಂದರೂ ಯಾವುದೇ ಪ್ರಯೋಜನವಾಗಿಲ್ಲವಂತೆ.

ಸಂಕಷ್ಟದ ಕುಟುಂಬಕ್ಕೆ ಸಹಕಾರ ಬೇಕು

ಸಂಕಷ್ಟದ ಕುಟುಂಬಕ್ಕೆ ಸಹಕಾರ ಬೇಕು

ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿಕೊಡುತ್ತಿರುವ ಮನೆ ಕೂಡ ಅರ್ಧಕ್ಕೆ ನಿಂತಿದೆ. ಕೈಕಾಲು ಸ್ವಾಧೀನವಿಲ್ಲದೆ ಮಕ್ಕಳಿಬ್ಬರು ಮಲಗಿದ್ದಲ್ಲೇ ಇರುವುದರಿಂದ ಅವರ ಆರೈಕೆ ಮಾಡುವುದರಲ್ಲಿಯೇ ತಾಯಿ ಸುನೀತಾಳ ದಿನ ಕಳೆದು ಹೋಗುತ್ತದೆ. ಸಿದ್ದಾಚಾರಿ ದುಡಿದು ನಾಲ್ಕು ಮಂದಿ ಬದುಕಬೇಕಾಗಿದೆ. ಒಟ್ಟಾರೆ ಈ ಕುಟುಂಬದ ಪರಿಸ್ಥಿತಿಯನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದರೆ ಒಂದಷ್ಟು ಸಹಕಾರಿಯಾಗಬಹುದೇನೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+