ಮೈಸೂರಿನ ಏಕೈಕ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುನ್ನುಡಿ ಬರೆದ ಸರ್ಕಾರ: ವಿವರ ಇಲ್ಲಿದೆ
ಮೈಸೂರು, ಅಕ್ಟೋಬರ್ 30: ಮೈಸೂರು ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹಿಡಿದಿದ್ದ ಗ್ರಹಣ ಕಳಚುವ ಆಸೆ ಕೈಗೂಡಿದ್ದು ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸರ್ಕಾರ ಅಧಿಕೃತವಾಗಿ ಮುನ್ನುಡಿ ಬರೆದಿದೆ.
ದಶಕದಷ್ಟು ಕಾಲ ಮುಚ್ಚಿ ನಿರಾಣಿ ಸಮೂಹದ ತೆಕ್ಕೆಗೆ ಜಾರಿದ್ದ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಕಾರ್ಖಾನೆಯ ನೊಂದಣಿ ಕಾರ್ಯಕ್ಕೆ ಸರ್ಕಾರ ಜನವರಿ 2 ತಾರೀಖಿನ ಡೆಡ್ ಲೈನ್ ನೀಡಿದ್ದು, ಮುಂದಿನ ಜುಲೈ ಅಥವಾ ಆಗಸ್ಟ್‌ನಿಂದ ಕಬ್ಬು ನುರಿಸಲು ಅನುವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರಾಣಿ ಶುಗರ್ಸ್‌ಗೆ ಸರ್ಕಾರ ನಿರ್ದೇಶನ ನೀಡಿದೆ.

2012ರಿಂದ 2022ರವರೆಗೆ ಕಾರ್ಖಾನೆ ಸ್ಥಗಿತಗೊಂಡು ಸಂಪೂರ್ಣ ಹಾಳಾಗಿತ್ತು. ಅಂದಿನ ಶಾಸಕರಾಗಿದ್ದ ಸಾ.ರಾ ಮಹೇಶರವರ ಪ್ರಯತ್ನದ ಫಲವಾಗಿ ಹಲವಾರು ಬಾರಿ ಟೆಂಡರ್ ಕರೆದರೂ ಯಾರೂ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಕಾರ್ಖಾನೆ ಪಾಳು ಬಿದ್ದತ್ತು. ನಂತರ ನಿರಾಣಿ ಸಮೂಹದ ಮನವೊಲಿಸಿ 2023ರಲ್ಲಿ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗಿತ್ತು.
ಅದರ ಫಲವಾಗಿ 2023ರ ಹಂಗಾಮಿನಲ್ಲಿ ಸುಮಾರು 20 ಸಾವಿರ ಟನ್ ಕಬ್ಬು ಅರೆದರೂ ಕೂಡ ಪದೇ ಪದೇ ಕೈಕೊಡುತ್ತಿದ್ದ ಹಳೆಯ ಯಂತ್ರಗಳಿಂದ ಹೆಚ್ಚಿನ ಕಾರ್ಯದಕ್ಷತೆ ಇಲ್ಲ ಎಂದು ಮನಗಂಡು ಕಾರ್ಖಾನೆಯ ಗುತ್ತಿಗೆಯನ್ನು ನೊಂದಣಿ ಮಾಡಿಸಿ ಎಂದು ಹೇಳಿ ಕೆಲವು ನಿಬಂಧನೆಗಳನ್ನು ಹಾಕಿ ನಿರಾಣಿ ಸಮೂಹ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿತ್ತು. ಹಾಗೂ ನೂತನ ಯಂತ್ರಗಳ ಅಳವಡಿಕೆ ಮಾಡಿದ ನಂತರ ಗುತ್ತಿಗೆ ಅವಧಿ ವಿಸ್ತರಣೆ ಸಾಧ್ಯವಿಲ್ಲ ಹಾಗೂ ನೊಂದಣಿಗೆ ಬೇಕಾಗುವ ಸುಮಾರು 2 ಕೋಟಿ ರೂಪಾಯಿಗಳ ಶುಲ್ಕವನ್ನು ವಿನಾಯತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಅದರಂತೆ ಸರ್ಕಾರ ಆರ್ಥಿಕ ಇಲಾಖೆ ಮತ್ತು ಕಬ್ಬು ಅಭಿವೃದ್ಧಿ ಸಚಿವಾಲಯ ಎಲ್ಲಾ ಪಕ್ರಿಯೆಗಳನ್ನು ಪೂರ್ಣಗೊಳಿಸಿ ಆಕ್ಟೋಬರ್ 3ರಂದು ಆರ್ಥಿಕ ಇಲಾಖೆಯ ಟಿಪ್ಪಣಿಯೊಂದಿಗೆ ಎನ್ಪಿವಿ ಆಧಾರದಂತೆ ನೊಂದಣಿ ಪ್ರಕ್ರಿಯೆ ಮುಗಿಸುವಂತೆ ಹಾಗೂ ಸದ್ಯ ಮಾಹಿತಿ ಪ್ರಕಾರ 2 ಕೋಟಿ ರೂಗಳ ನೊಂದಣಿ ವೆಚ್ಚವನ್ನು ಮನ್ನಾ ಮಾಡಿ ಹಾಗೂ 2022-23ರಿಂದ 40 ವರ್ಷಕ್ಕೆ ವಿಸ್ತರಿಸಿ ಗುತ್ತಿಗೆ ನೀಡಲು ಆದೇಶಿಸಿದೆ ಎಂದು ತಿಳಿದು ಬಂದಿದೆ.
ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಿಸುವ ವಿಚಾರವಾಗಿ ಶಾಸಕ ರವಿಶಂಕರ್ ಅವರು ಕಳೆದ ವಿಧಾನ ಸಭಾ ಅಧಿವೇಶನಗಳಲ್ಲೂ ಸರ್ಕಾರವನ್ನು ಒತ್ತಾಯಿಸಿದ್ದರು. ಹಾಗೂ ಸಕ್ಕರೆ ಸಚಿವರನ್ನು ಭೇಟಿ ಮಾಡಿ ನೊಂದಣಿ ಪ್ರಕ್ರಿಯೆಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಈ ಸಲುವಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ನೇತೃತ್ವದಲ್ಲಿ ಪ್ರತಿಭಟನೆಗಳನ್ನು ಮಾಡಿದ್ದನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಬಹುದು.
ಕಾರ್ಖಾನೆಯನ್ನು ಅವಲಂಭಿಸಿ ಈ ವ್ಯಾಪ್ತಿಯ ಕೆ.ಆರ್ ನಗರ, ಸಾಲಿಗ್ರಾಮ ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ ತಾಲೂಕುಗಳ ಒಳಪಟ್ಟಿದ್ದು ಸದ್ಯ ಈ ಭಾಗದ ಕಬ್ಬು ಮಂಡ್ಯ ಜಿಲ್ಲೆಯ ವಿವಿಧ ಕಾರ್ಖಾನೆಗಳ ಕಳುಹಿಸಿ ಅರೆಸಲಾಗುತ್ತಿತ್ತು. ಚುಂಚನಕಟ್ಟೆ ಕಾರ್ಖಾನೆಯೇ ಆರಂಭವಾದರೆ ಸದ್ಯ ಕೆ.ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿಯೇ 5 ಲಕ್ಷ ಟನ್ ಕಬ್ಬು ಬೆಳೆಯಬಹುದಾಗಿದೆ. ಇದು ರೈತರಿಗೆ ಅನುಕೂಲವಾಗಲಿದೆ.












Click it and Unblock the Notifications