ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ಬಂತು ಕೊರೊನಾ ವೈರಸ್ ಲಸಿಕೆ
ಮೈಸೂರು, ಆಗಸ್ಟ್ 31: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.
Recommended Video
'ಕೋವಿಶೀಲ್ಡ್‌ನ ಕ್ಲಿನಿಕಲ್ ಪ್ರಯೋಗ ನಮ್ಮ ಆಸ್ಪತ್ರೆಯಲ್ಲಿ ಶನಿವಾರ ಪ್ರಾರಂಭವಾಗಿದೆ. ಕೋವಿಶೀಲ್ಡ್ ಲಸಿಕೆಯ ಪರಿಣಾಮಗಳು ಮತ್ತು ಕೊರೊನಾ ವೈರಸ್ ರೋಗಿಗಳ ಮೇಲಿನ ಅದರ ದಕ್ಷತೆಯನ್ನು ಪರಿಶೀಲಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಆಯ್ಕೆಮಾಡಿರುವ ಕರ್ನಾಟಕದ ಏಕೈಕ ಆಸ್ಪತ್ರೆ ಇದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಭಾರತದ ವಿವಿಧೆಡೆ ಇತರೆ 16 ವೈದ್ಯಕೀಯ ಸಂಸ್ಥೆಗಳಲ್ಲಿ ನಡೆಯುತ್ತಿವೆ.
ಸುತ್ತೂರು ಮಠ ನಡೆಸುತ್ತಿರುವ ಜಗದ್ಗುರು ಶ್ರೀ ಶಿವರಾತ್ರಿ (ಜೆಎಸ್ಎಸ್) ಆಸ್ಪತ್ರೆಯು ನಂಜನಗೂಡಿನಲ್ಲಿದ್ದು, 1,800 ಹಾಸಿಗೆ ವ್ಯವಸ್ಥೆ ಹೊಂದಿದೆ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 195ನೇ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಇಲ್ಲಿ ಪ್ರಯೋಗ ಆರಂಭವಾಗಿದೆ. ಮುಂದೆ ಓದಿ.

ಮೊದಲ ಹಂತ ಮುಕ್ತಾಯ
ಮೂರು ಹಂತದ ಪ್ರಯೋಗಗಳಲ್ಲಿ ಒಂದು ಹಂತದ ಪ್ರಯೋಗ ಮುಕ್ತಾಯಗೊಂಡಿದ್ದು, ಅದರ ವಿವರಗಳನ್ನು ಐಸಿಎಂಆರ್‌ಗೆ ಸಲ್ಲಿಕೆ ಮಾಡಲಾಗಿದೆ. ಪುಣೆ ಮೂಲದ ಸೆರಮ್ ಸಂಸ್ಥೆ ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ. ಅದರೊಂದಿಗೆ ಬ್ರಿಟನ್‌ನ ಪ್ರಮುಖ ಔಷಧ ಕಂಪೆನಿ ಆಸ್ಟ್ರಾಜೆನಿಕಾ ಸಹಯೋಗವಿದೆ. ಅದು ಬೆಂಗಳೂರಿನಲ್ಲಿ ತನ್ನ ಕಾರ್ಯಚಟುವಟಿಕೆ ಹೊಂದಿದೆ.

ಐವರು ಸ್ವಯಂಸೇವಕರ ಮೇಲೆ ಪ್ರಯೋಗ
ಐದು ಮಂದಿ ಸ್ವಯಂಸೇವಕರ ಆರೋಗ್ಯ ತಪಾಸಣೆ ಮಾಡಿ ತನಿಖೆ ಮತ್ತು ನಿಗಾವಣೆ ಬಳಿಕ ಎರಡನೆಯ ಹಂತದ ಪ್ರಯೋಗಕ್ಕಾಗಿ ಲಸಿಕೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವಯಂಸೇವಕರ ಮೇಲೆ ಲಸಿಕೆಗಳನ್ನು ಪ್ರಯೋಗಿಸುವ ಮುನ್ನ ಅವರ ದೇಹದ ಉಷ್ಣತೆ, ರಕ್ತದೊತ್ತಡ ಮತ್ತು ಹೃದಯ ಬಡಿತಗಳಂತಹ ಪ್ರಮುಖ ಸಂಗತಿಗಳನ್ನು ಪರಿಶೀಲಿಸಲಾಗುತ್ತದೆ ಎಂದು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಬಿ. ಸುರೇಶ್ ತಿಳಿಸಿದ್ದಾರೆ.

ಇನ್ನೂ ಎರಡು ಲಸಿಕೆ ಪ್ರಯೋಗಗಳು
ಕೋವಿಶೀಲ್ಡ್ ಅಲ್ಲದೆ, ಭಾರತದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ಅಹ್ಮದಾಬಾದ್‌ನ ಜಿಡಸ್ ಕ್ಯಾಡಿಲಾದ ಜಿಕೋವ್-ಡಿ ಲಸಿಕೆಗಳನ್ನು ಕೂಡ ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ವಿರುದ್ಧ ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾಗಿದ್ದು, ಅವುಗಳ ಪರೀಕ್ಷೆ ನಡೆಯುತ್ತಿದೆ.

28 ದಿನದ ಅಂತರ ಕಡ್ಡಾಯ
ಐಸಿಎಂಆರ್‌ನ ನಿಯಮಾವಳಿಗಳ ಪ್ರಕಾರ ಸ್ವಯಂಸೇವಕರಿಗೆ ಒಮ್ಮೆ ಲಸಿಕೆ ಪ್ರಯೋಗ ಮಾಡಿದ 28 ದಿನಗಳ ಒಳಗೆ ಮತ್ತೊಮ್ಮೆ ಡೋಸ್ ನೀಡಿ ಪ್ರಯೋಗ ಮಾಡುವಂತಿಲ್ಲ. ಲಸಿಕೆಯ ಸುರಕ್ಷತೆಯನ್ನು ಗಮನಿಸುವ ಸಲುವಾಗಿ ಈ ಲಸಿಕೆ ಪ್ರಯೋಗಗಳ ನಡುವಿನ ಅಂತರದ ಸೂಚನೆಯನ್ನು ನೀಡಲಾಗಿದೆ.

ಮೂರನೇ ಹಂತದಲ್ಲಿ 1,500 ಸ್ವಯಂಸೇವಕರು
ವೈದ್ಯರ ತಂಡವೊಂದು ಬಿಸಿಜಿ ಲಸಿಕೆಗಳನ್ನು ಹಿರಿಯ ನಾಗರಿಕರ ಮೇಲೆ ಕೋವಿಡ್-19 ಪ್ರಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದು, ಅದರ ಪರಿಣಾಮಗಳ ಡೇಟಾಗಳನ್ನು ಸಂಗ್ರಹಿಸುತ್ತಿದೆ. ಕೋವಿಶೀಲ್ಡ್‌ನ ಎರಡನೆಯ ಹಂತದ ಪ್ರಯೋಗದಲ್ಲಿ ದೇಶದ 17 ಸಂಸ್ಥೆಗಳಲ್ಲಿ ಸುಮಾರು 100 ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಮೂರನೇ ಮತ್ತು ಕೊನೆಯ ಹಂತದ ಪ್ರಯೋಗದಲ್ಲಿ ದೇಶದಾದ್ಯಂತ ಸುಮಾರು 1,500 ಸ್ವಯಂಸೇವಕರಿಗೆ ಲಸಿಕೆ ನೀಡಿ ಅವರಲ್ಲಿ ಆಂಟಿಬಾಡಿಗಳ ಉತ್ಪಾದನೆಯನ್ನು ಪರಿಶೀಲಿಸಲಾಗುತ್ತದೆ.












Click it and Unblock the Notifications