ಕೋವಿಡ್ ಸೋಂಕು ಹೆಚ್ಚಳ: ಮೈಸೂರಿನ ಆರೋಗ್ಯ ಕೇಂದ್ರಗಳಲ್ಲಿ ಮಾಕ್ ಡ್ರಿಲ್
ಮೈಸೂರು, ಏಪ್ರಿಲ್, 11: ರಾಜ್ಯಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣುಕು ಪ್ರದರ್ಶನ ನಡೆಸಲಾಯಿತು
ಚಿಕಿತ್ಸಾ ಸಾಮಾಗ್ರಿಗಳ ವಿಕ್ಷಣೆ
ಜಿಲ್ಲಾ ಸರ್ಜನ್ ಡಾ.ಟಿ.ಅಮರನಾಥ್ ನೇತೃತ್ವದಲ್ಲಿ ವೈದ್ಯರು ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳು, ಐಸಿಯು ಬೆಡ್‌ಗಳು, ಆಕ್ಸಿಜನ್ ಬೆಡ್‌ಗಳು, ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಪರೀಕ್ಷಿಸಿದರು.

ಇನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ, ಎಸ್‌ಎಂಟಿ, ಪಿಕೆಟಿಬಿ, ಸೂಪರ್ ಸ್ಪೆಷಾಲಿಟಿ, ಟ್ರಾಮಾಕೇರ್ ಸೆಂಟರ್, ಇಎಸ್‌ಐ, ಜಿಲ್ಲಾಸ್ಪತ್ರೆ, ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಂದು ವೈದ್ಯರು, ಸಿಬ್ಬಂದಿ ಮಾಕ್ ಡ್ರಿಲ್ ನಡೆಸಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ನಿಭಾಯಿಸಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾಧಿಕಾರಿಗಳು ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
ಆಸ್ಪತ್ರೆಗಳಿಗೆ ಬರುವ ರೋಗಿಗಳ ಪೈಕಿ ಜ್ವರ, ನೆಗಡಿ, ಮೈಕೈ ನೋವು, ತಲೆನೋವು, ಉಸಿರಾಟದ ತೊಂದರೆ ಇರುವವರನ್ನು ಗುರುತಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಆದರೆ ಸಾರ್ವಜನಿಕರಿಗೆ ಟೆಸ್ಟ್ ಮಾಡಿಸುತ್ತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ತಿಳಿಸಿದ್ದಾರೆ.
43 ಮಂದಿಗೆ ಕೊರೊನಾ ಸೋಂಕು ಪತ್ತೆ
ಜಿಲ್ಲೆಯಲ್ಲಿ ಒಟ್ಟು 43 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೂರು ಮಂದಿ ಕೆ.ಆರ್. ಆಸ್ಪತ್ರೆ ಕೋವಿಡ್ ವಾರ್ಡ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರು ಕೋಮಾರ್ಬಿಡಿಟಿ ಸಮಸ್ಯೆ ಇರುವವರು ಹಾಗೂ 70 ವರ್ಷದ ಮೇಲ್ಪಟ್ಟವರಾಗಿದ್ದಾರೆ. ಇವರು ಹಲವು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ತಿಳಿಸಿದರು.

ಕೆಲವರಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತಿವೆ. ಆದರೂ, ಯಾರೂ ಆಸ್ಪತ್ರೆಗಳಲ್ಲಿ ದಾಖಲು ಮಾಡುವಷ್ಟು ತೀವ್ರತೆ ಇಲ್ಲವಾದ್ದರಿಂದ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ. ಆದರೆ ಕೋವಿಡ್ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಲಸಿಕೆ ಅಭಾವ
ರಾಜ್ಯದಲ್ಲಿ ಇನ್ನೇನು ಮಹಾಮಾರಿ ಕೊರೊನಾ ಕಾಟದಿಂದ ಮುಕ್ತಿ ಸಿಕ್ಕಿದೆ ಅನ್ನುವಷ್ಟರಲ್ಲಿಯೇ ಮತ್ತೆ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಜನರಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ ರಾಜ್ಯ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಲಸಿಕೆ ದಾಸ್ತಾನುಗಳನ್ನು ಹೊಂದಿಲ್ಲ. ಇದರಿಂದ ರಾಜ್ಯದಲ್ಲಿ ಲಸಿಕೆ ಅಭಾವ ಎದುರಾಗಿದೆ.
ಸಾರ್ವಜನಿಕ ಆರೋಗ್ಯ ಕೇಂದ್ರಗಳು ದುರ್ಬಲರಿಗೆ ಬೂಸ್ಟರ್ ಡೋಸ್ ನೀಡಲು ಹಿಂದೇಟು ಹಾಕುತ್ತಿವೆ. ಏಕೆಂದರೆ ಕೇಂದ್ರವು ತಾಜಾ ಡೋಸ್‌ಗಳನ್ನು ರಾಜ್ಯಕ್ಕೆ ಪೂರೈಸಲು ನಿರಾಕರಿಸಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಇದರಿಂದ ನಷ್ಟವನ್ನು ಉಲ್ಲೇಖಿಸಿ ಡೋಸ್ ಸಂಗ್ರಹಿಸುವುದನ್ನು ಕೂಡ ನಿಲ್ಲಿಸಿದ್ದಾರೆ.
ಜನವರಿಯಲ್ಲಿ ರಾಜ್ಯವು ಕೇವಲ ಒಂದು ಕೋವಿಡ್ ಸಾವು ಪ್ರಕರಣ ದಾಖಲಿಸಿತ್ತು. ಮಾರ್ಚ್‌ನಲ್ಲಿ ಈ ಸಂಖ್ಯೆ 12ಕ್ಕೆ ಏರಿಕೆ ಆಗಿದ್ದು, ಏಪ್ರಿಲ್‌ನಲ್ಲಿ ದಿನಕ್ಕೆ ಸರಾಸರಿ ಒಂದದಂತೆ ಪ್ರಕರಣಗಳ ಸಂಖ್ಯೆ ಏರಿಕೆ ಆಗಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಾಗ, ಕರ್ನಾಟಕವು ಫೆಬ್ರವರಿವರೆಗೆ ಲಸಿಕೆ ಡ್ರೈವ್‌ಗಳನ್ನು ನಡೆಸಿತು. ಅಂದಿನಿಂದ ಯಾವುದೇ ದಾಸ್ತಾನು ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ನಾವು ಮಾರ್ಚ್ ಮೂರನೇ ವಾರದಲ್ಲಿ ಬೇಡಿಕೆಯ ಆಧಾರದ ಮೇಲೆ ಒಂದು ಲಕ್ಷ ಕಾರ್ಬೆವಾಕ್ಸ್ ಡೋಸ್‌ಗಳನ್ನು ನೀಡುವಂತೆ ಕೇಂದ್ರಕ್ಕೆ ವಿನಂತಿಸಿದ್ದೇವೆ. ಆದರೆ ಏಪ್ರಿಲ್ 7ರಂದು ನಡೆದ ಸಭೆಯಲ್ಲಿ ಆರೋಗ್ಯ ಸಚಿವಾಲಯವು ಡೋಸ್‌ಗಳನ್ನು ಪೂರೈಸುವುದಿಲ್ಲ ಎಂದು ತಿಳಿಸಿದೆ ಅಂತಾ ಟಿ.ಕೆ.ಅನಿಲ್ ಕುಮಾರ್ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿಎಚ್‌ಒಗೆ ತಿಳಿಸಿದ್ದಾರೆ. ತಯಾರಕರಿಂದ ಲಸಿಕೆ ಖರೀದಿಸಲು ನಿರ್ಧಾರ ಕರ್ನಾಟಕವು ಈಗ ಲಸಿಕೆಗಳನ್ನು ತಯಾರಕರಿಂದ ನೇರವಾಗಿ ಖರೀದಿಸಬೇಕಾಗುತ್ತದೆ.
ವೆಚ್ಚಗಳು, ಲಭ್ಯತೆ ಇತ್ಯಾದಿಗಳ ಆಧಾರದ ಮೇಲೆ ನಾವು ಮುಂದಿನ ವಾರ ಲಸಿಕೆ ಸಂಗ್ರಹಣೆಯ ಬಗ್ಗೆ ನಿರ್ಧರಿಸುತ್ತೇವೆ ಎಂದು ಕುಮಾರ್ ಹೇಳಿದರು. ಇನ್ನು ದೀರ್ಘಾಕಾಲದ ಶ್ವಾಸಕೋಶದ ಅಥವಾ ಹೃದಯ ಖಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, ಇಮ್ಯುನೊಸಪ್ರೆಸೆಂಟ್ಸ್ ಮತ್ತು ವಯಸ್ಸಾದವರಿಗೆ ಬೂಸ್ಟರ್ ಡೋಸ್ ನಿರ್ಣಾಯಕವಾಗಿದೆ. ಮತ್ತು ಇತರರು ಕೂಡ ಈ ಡೋಸ್ ಪಡೆಯಬೇಕು ಎಂದು ವೈರಾಲಜಿಸ್ಟ್ ಡಾ.ಜಾಕೋಬ್ ಜಾನ್ ತಿಳಿಸಿದ್ದಾರೆ.












Click it and Unblock the Notifications