ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಸಂಸದ ಪ್ರತಾಪ್ ಸಿಂಹ ಕಾರಿಗೆ ಮುತ್ತಿಗೆ
ಮೈಸೂರು, ಜುಲೈ 05: ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಿಲ್ಲವೆಂದು ಆರೋಪಿಸಿ ಬುಧವಾರ ರಾಜ್ಯಾದ್ಯಂತ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಈ ವೇಳೆ ಸಂಸದ ಪ್ರತಾಪ್ ಸಿಂಹ ಅವರ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಲದರ್ಶಿನಿಯಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಸಂಸದರು ತೆರಳುತ್ತಿದ್ದ ಕಾರಿಗೆ ಅಡ್ಡಗಟ್ಟಿ ಆಕ್ರೋಶ ಹೊರ ಹಾಕಿದರು. ಹಾಗಾಗಿ ಸಂಸದರ ಕಚೇರಿ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಜಲದರ್ಶಿನಿ ಅತಿಥಿಗೃಹದ ಮುಖ್ಯದ್ವಾರದ ಗೇಟ್‌ಅನ್ನು ಪೊಲೀಸರು ಬಂದ್ ಮಾಡಿದರು. ಪ್ರತಿಭಟನಾಕಾರರ ದ್ವಿಚಕ್ರ ವಾಹನಗಳನ್ನು ಒಳ ಬಿಡಲು ಪೊಲೀಸರು ಅವಕಾಶ ನೀಡಲಿಲ್ಲ. ದ್ವಿಚಕ್ರ ವಾಹನಗಳನ್ನು ಹೊರಗಡೆಯೇ ನಿಲ್ಲಿಸುವಂತೆ ಪೊಲೀಸರು ಸೂಚಿಸಿದರು.
ಆರು ತಿಂಗಳೊಳಗೆ ಹೆದ್ದಾರಿಯನ್ನು ಸುಸಜ್ಜಿತಗೊಳಿಸುತ್ತೇವೆ-ಸಂಸದ ಪ್ರತಾಪ್ ಸಿಂಹ
ಇನ್ನು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಮೈಸೂರು-ಬೆಂಗಳೂರು ಹೈವೇಯಲ್ಲಿ ಅಪಘಾತಗಳು ಸಂಭವಿಸಲು ಅತಿ ವೇಗ ಕಾರಣ ಎಂದು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಯಿಸಿ,ಈ ವಿಚಾರವನ್ನು ನಾನು ಮೊದಲೇ ಹೇಳಿದ್ದೆ. ಕೆಲ ವಾಹನ ಸವಾರರು ಹೈವೇಗೆ ಇಳಿಯುತ್ತಿದ್ದಂತೆ ಅತಿ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಮೈ ಮೇಲೆ ಏನೋ ಬಂದವರಂತೆ ವಾಹನ ಚಲಾಯಿಸುತ್ತಾರೆ. ಆದರೆ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಅಪಘಾತ ಆಗುತ್ತಿವೆ ಎಂದು ದೂರುತ್ತಾರೆ.
ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೈವೇಯಲ್ಲಿ ಮನಬಂದಂತೆ ವಾಹನ ಚಲಾಯಿಸುವ ಬದಲು ವಾಹನದ ವೇಗದ ಮಿತಿಗೆ ತಕ್ಕಂತೆ ವಾಹನ ಚಲಾಯಿಸಿದರೆ ಅಪಘಾತ ಉಂಟಾಗುವುದಿಲ್ಲ. ಇದರ ನಡುವೆಯೂ ಹೈವೇಯಲ್ಲಿ ಏನಾದರೂ ಸಣ್ಣಪುಟ್ಟ ದೋಷಗಳಿದ್ದರೂ ಅದನ್ನು ಮುಂದಿನ ಹದಿನೈದು ದಿನದಲ್ಲಿ ಸರಿಪಡಿಸುತ್ತೇವೆ. ಮುಂದಿನ ಆರು ತಿಂಗಳೊಳಗೆ ಯಾವುದೇ ಸಮಸ್ಯೆಗಳು ಇಲ್ಲದಂತೆ ಹೈವೆಯನ್ನು ಸುಸಜ್ಜಿತಗೊಳಿಸುತ್ತೇವೆ ಎಂದರು.

ರಾಜ್ಯ ಬಜೆಟ್ ಬಗ್ಗೆ ಮಾತನಾಡಿದ ಅವರು, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕಾಡಂಚಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಅನುದಾನ ಮೀಸಲಿಡಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗೆ ರೈಲ್ವೆ ಕಂಬಿ ಅಳವಡಿಕೆಗೆ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಈಗಾಗಲೇ ಪ್ರಗತಿಯಲ್ಲಿರುವ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ತಡೆಹಿಡಿದಿರುವುದು ಸರಿಯಲ್ಲ. ನೀವು ಯಾವುದೇ ರೀತಿಯ ತನಿಖೆಯನ್ನು ಮಾಡಿಕೊಳ್ಳಿ. ಆದರೆ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಅನುದಾನ ತಡೆ ಹಿಡಿಯಬೇಡಿ. ಮೈಸೂರಿನ ರಿಂಗ್ ರಸ್ತೆಯ ಕಾಮಗಾರಿಯ 12 ಕೋಟಿ ಹಣದ ಪೈಕಿ 6 ಕೋಟಿ ನೀಡಿ, ಇನ್ನುಳಿದ 6 ಕೋಟಿ ತಡೆಹಿಡಿದಿದ್ದೀರಿ. ಪರಿಣಾಮ ರಿಂಗ್ ರಸ್ತೆ ಮತ್ತೆ ಕತ್ತಲಾಗಿದೆ. ನೀವು ಯಾವುದೇ ತನಿಖೆ ಮಾಡಿಸಿ, ಆದರೆ ಅಭಿವೃದ್ಧಿ ಕಾಮಗಾರಿಯ ಅನುದಾನ ತಡೆ ಹಿಡಿಯಬೇಡಿ ಎಂದರು.
ಬರಗಾಲ ಎದುರಾದರೆ ಅದನ್ನು ನಿಭಾಯಿಸಲು ರಾಜ್ಯ ಸರ್ಕಾರ ಸನ್ನದ್ದವಾಗಬೇಕು. ರಾಜ್ಯದಲ್ಲಿ ಮುಂಗಾರು ಮಳೆ ಆರಂಭದಲ್ಲೇ ಕೈಕೊಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತಗೊಂಡಿದೆ. ಕೊಡಗಿನಲ್ಲಿ ಮಳೆಯಾಗದ ಕಾರಣ ಕೆಆರ್‌ಎಸ್ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಪರಿಣಾಮ ಬೆಂಗಳೂರು ಮೈಸೂರಿನಂತಹ ಮಹಾನಗರಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ತಮಿಳುನಾಡಿಗೆ ಜೂನ್ ಜುಲೈ ತಿಂಗಳ ಕೋಟಾ ಪ್ರಕಾರ ನೀರು ಬಿಡಲಾಗುವುದಿಲ್ಲ ಎಂದು ಕಾವೇರಿ ನ್ಯಾಯ ಮಂಡಳಿಗೆ ವಾಸ್ತವ ಪರಿಸ್ಥಿಯನ್ನು ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ಮೊದಲೇ ಪ್ರಮಾಣಪತ್ರ ಸಲ್ಲಿಸಬೇಕು. ತಮಿಳುನಾಡು ತಗಾದೆ ತೆಗೆದು, ತಮಿಳರು-ಕನ್ನಡಿಗರು ಹೊಡೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಮನವಿ ಮಾಡಿಕೊಳ್ಳಿ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿ ಎಂದಿಗೂ ಕರ್ನಾಟಕದ ಪರವಿದೆ ಎಂದರು.












Click it and Unblock the Notifications