Gruhalakshmi Scheme: ಮೋದಿ ಅಕೌಂಟ್ ಮಾಡಿಸಿದ್ದಾರೆ ನೀವು ಹಣ ಹಾಕಿ ಎಂದ ಪ್ರತಾಪ್ ಸಿಂಹಗೆ ಕಾಂಗ್ರೆಸ್ ತಿರುಗೇಟು
ಕಾಂಗ್ರೆಸ್ ಚುನಾವಣೆಗೆ ಮುನ್ನ ಆಶ್ವಾಸನೆ ಕೊಟ್ಟಂತೆ ಮನೆಯೊಡತಿಗೆ ಪ್ರತಿ ತಿಂಗಳು 2000 ರುಪಾಯಿ ಹಣ ನೀಡುವುದಾಗಿ ಘೋಷಣೆ ಮಾಡಿದೆ. ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸ್ವೀಕರಿಸಲಿದ್ದು, ಆಗಸ್ಟ್ 15ರಿಂದ ಖಾತೆಗಳಿಗೆ ಹಣ ಹಾಕುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಘೋಷಣೆ ವೇಳೆ ಅಕೌಂಟ್ ಮಾಡಿಸಬೇಕು, ಅರ್ಜಿ ಪರಿಶೀಲನೆಗೆ ಸಮಯ ಬೇಕಾಗುತ್ತದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿಯವರು ಜನ್ ಧನ್ ಯೋಜನೆಯಲ್ಲಿ ಎಲ್ಲರಿಗೂ ಅಕೌಂಟ್ ಮಾಡಿಸಿದ್ದಾರೆ ನೀವು ಹಣ ಹಾಕಿ ಸಾಕು ಎಂದು ಕೇಳಿದ್ದರು. ಅಲ್ಲದೆ ಮುಸ್ಲಿಂ ವ್ಯಕ್ತಿಗಳ ಮನೆಯಲ್ಲಿ ಇಬ್ಬರು ಮೂವರು ಹೆಂಡತಿಯರು ಇರುತ್ತಾರೆ ಅವರಲ್ಲಿ ಮನೆಯೊಡತಿ ಯಾರೆಂದು ನಿರ್ಧಾರ ಮಾಡುತ್ತಿರಾ ಎಂದು ಪ್ರಶ್ನೆ ಮಾಡಿದ್ದರು.

ಪ್ರತಾಪ್ ಸಿಂಹ ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಕಾಂಗ್ರೆಸ್ ಪ್ರಧಾನಿ ಮೋದಿ ಘೋಷಣೆ ಮಾಡಿದ್ದ 15 ಲಕ್ಷ ರುಪಾಯಿ ಬಂತಾ ಎಂದು ಪ್ರಶ್ನೆ ಮಾಡಿದೆ. ಪ್ರತಾಪ್ ಸಿಂಹ ಪ್ರಶ್ನೆ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ " ಜನಧನ್ ಖಾತೆಗೆ ಮೋದಿಯವರ 15 ಲಕ್ಷ ಬರಲಿಲ್ಲವೇಕೆ? ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದವರು ಈಗ ಕಾಂಗ್ರೆಸ್ ಸರ್ಕಾರಕ್ಕೆ 2000 ರುಪಾಯಿ ಹಾಕಿ ಎನ್ನುತ್ತಿರುವುದು ಹಾಸ್ಯಾಸ್ಪದ ಅಲ್ಲವೇ ಪ್ರತಾಪ್ ಸಿಂಹ ಅವರೇ?" ಎಂದು ಪ್ರಶ್ನೆ ಮಾಡಿದೆ.
ಜನಧನ್ ಖಾತೆಗೆ ಮೋದಿಯವರ 15 ಲಕ್ಷ ಬರಲಿಲ್ಲವೇಕೆ?
— Karnataka Congress (@INCKarnataka) June 3, 2023
ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದವರು ಈಗ ಕಾಂಗ್ರೆಸ್ ಸರ್ಕಾರಕ್ಕೆ ₹2000 ಹಾಕಿ ಎನ್ನುತ್ತಿರುವುದು ಹಾಸ್ಯಾಸ್ಪದ ಅಲ್ಲವೇ @mepratap? pic.twitter.com/S7snyYNNE1
ಕ್ಷಮೆ ಕೇಳುವಂತೆ ಕಾಂಗ್ರೆಸ್ ಆಗ್ರಹ
ಅತ್ತೆ ಸೊಸೆ ಜಗಳ ವಿಚಾರದ ಬಗ್ಗೆ ಪ್ರತಾಪ್ ಸಿಂಹ ಮಾತನಾಡಿರುವುದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಟ್ವೀಟ್ ಮಾಡಿರುವ ಕಾಂಗ್ರೆಸ್ "ಅತ್ತೆ ಸೊಸೆ ಜಗಳ" ಎಂಬ ವಿಚಾರವನ್ನು ಮುನ್ನೆಲೆಗೆ ತಂದು ರಾಜ್ಯದ ಮಹಿಳಾ ಸಮುದಾಯವನ್ನು ಬಿಜೆಪಿ ಅವಮಾನಿಸುತ್ತಿದೆ ಎಂದು ಆರೋಪಿಸಿದೆ.
ಮಹಿಳೆಯರನ್ನು ಜಗಳ ಮಾಡುವವರು ಎಂಬಂತೆ ಬಿಂಬಿಸುತ್ತಿರುವ ಕರ್ನಾಟಕ ಬಿಜೆಪಿ ಸ್ತ್ರೀ ಗೌರವವನ್ನು ಕಳೆಯುವ ಮೂಲಭೂತವಾದವನ್ನು ಸಮಾಜದಲ್ಲಿ ಸ್ಥಾಪಿಸುತ್ತಿದೆ. ಪ್ರತಾಪ್ ಸಿಂಹ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
ಕಾಂಗ್ರೆಸ್ ನೀಡಿದ್ದ ಆಶ್ವಾಸನೆಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದ ನಂತರ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಜೋರಾಗಿದೆ. ಗ್ಯಾರಂಟಿ ಘೋಷಣೆಗೆ ಷರತ್ತು ವಿಧಿಸಿರುವುದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications