ಲೋಕಸಭಾ ಎಲೆಕ್ಷನ್ : ಮೈಸೂರು-ಕೊಡಗಿನಲ್ಲಿ ಕೈ, ತೆನೆ ಮೈತ್ರಿಯಾಗುತ್ತಾ?
ಮೈಸೂರು, ಆಗಸ್ಟ್ 10: ಲೋಕಸಭಾ ಚುನಾವಣೆಗೂ ಜೆಡಿಎಸ್ ಜತೆಗೆ ದೋಸ್ತಿ ಮುಂದುವರಿಯಲಿದೆ ಎಂದು ಕೈ ಪಡೆ ಪುನರುಚ್ಚರಿಸುತ್ತಿದ್ದರೂ ತಳಮಟ್ಟದಲ್ಲಿ ಮಾತ್ರ ದೋಸ್ತಿಗೆ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಈ ಬಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶುರುವಿಟ್ಟುಕೊಂಡಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್ ಸಂಘಟನೆಗೆ ಹಿನ್ನಡೆ ಉಂಟಾಗಲಿದೆ ಎಂಬ ಮಾತನ್ನು ಕೈ ಮುಖಂಡರು ನುಡಿಯುತ್ತಿದ್ದಾರೆ. ಹಾಗಾಗಿ ಮೈತ್ರಿ ಬೇಡವೇ ಬೇಡವೆಂಬ ನಿರ್ಧಾರಕ್ಕೆ ಬಂದ ಹಾಗಿದೆ.
ಜೊತೆಗೆ ಕಾಂಗ್ರೆಸ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿ.ಎಚ್.ವಿಜಯಶಂಕರ್ ಅವರನ್ನು ಅಭ್ಯರ್ಥಿಯಾಗಿಸುವ ಬಗ್ಗೆಯೂ ಚರ್ಚೆಯಾಗಿದೆ. ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ "ಇದೇ ನನ್ನ ಕಡೇ ಚುನಾವಣೆ. ರಾಷ್ಟ್ರ ರಾಜಕಾರಣಕ್ಕೂ ಹೋಗುವುದಿಲ್ಲ"ವೆಂದು ಹೇಳಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿರುವುದರಿಂದ ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಕುತೂಹಲವೂ ಇದೆ.

ಸಿ.ಎಚ್.ವಿಜಯಶಂಕರ್ ಗೆ ಟಿಕೆಟ್?
ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡು ಕಾಂಗ್ರೆಸ್‌ನಿಂದ ಹೊರಹೋದ ಎಚ್.ವಿಶ್ವನಾಥ್ ಅವರ ಸ್ಥಾನಕ್ಕೆ ಅದೇ ಸಮುದಾಯದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರನ್ನು ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವ ಭರವಸೆಯೊಂದಿಗೆ ಕಾಂಗ್ರೆಸ್‌ಗೆ ಕರೆತಂದಿದ್ದಾರೆ.

ಪ್ರಜ್ವಲ್ ರೇವಣ್ಣ ಸಕ್ರಿಯ
ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಹಂಚಿಕೆ ಸಿದ್ದರಾಮಯ್ಯ ಅವರ ನಿರ್ಧಾರದ ಮೇಲೆ ನಿಂತಿದೆ. ಇತ್ತ ಜೆಡಿಎಸ್ ನಿಂದ ಸಚಿವ ಜಿ.ಟಿ.ದೇವೇಗೌಡರ ಪುತ್ರ ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್ ಗೌಡ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಕೆಲ ಮುಖಂಡರು ಒತ್ತಾಯಿಸಿದ್ದರು.
ಆದರೆ, ಜಿ.ಟಿ.ದೇವೇಗೌಡರೇ ಲೋಕಸಭೆ ಚುನಾವಣೆಗೆ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಮತ್ತೆ ಸಕ್ರಿಯವಾಗಿದ್ದು, ಪ್ರಜ್ವಲ್ ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಯುವ ಬ್ರಿಗೇಡ್ ಮೂಲಕ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.

ಹುಣಸೂರು ಕ್ಷೇತ್ರ ಬಿಟ್ಟಿಕೊಟ್ಟ ಜಿಟಿಡಿ
ಮೈಸೂರು ಜಿಲ್ಲೆಯ ರಾಜಕಾರಣದಲ್ಲಿ ಇಂತಹ ಪ್ರಯತ್ನ ಹೊಸದೇನಲ್ಲ. ಪ್ರಜ್ವಲ್ ರೇವಣ್ಣ ಹೆಸರು ಜಿಲ್ಲೆಯಲ್ಲಿ ಕೇಳಿಬಂದಿದ್ದು ಎರಡನೇ ಬಾರಿ. ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಹುಣಸೂರು ಕ್ಷೇತ್ರಕ್ಕೆ ಪ್ರಜ್ವಲ್ ಹೆಸರು ಕೇಳಿಬಂದಿತ್ತು. ಜತೆಗೆ ಚುನಾವಣೆಗೂ ಮುನ್ನ ತಿಂಗಳು ಕಾಲ ಯುವ ಪಡೆ ಜತೆಗೆ ಕ್ಷೇತ್ರದಲ್ಲಿ ಪ್ರವಾಸವನ್ನೂ ಆರಂಭಿಸಿದ್ದರು ಕೂಡ.
ತಮ್ಮ ಪುತ್ರ ಜಿ.ಡಿ.ಹರೀಶ್ ಗೌಡ ಅವರಿಗಾಗಿ ಹುಣಸೂರಿನ ಕಣ ಸಜ್ಜುಗೊಳಿಸಿದ್ದ ಜಿ.ಟಿ.ದೇವೇಗೌಡ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಎಚ್.ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರಿಂದ ಹುಣಸೂರು ಕ್ಷೇತ್ರವನ್ನು ಜಿ.ಟಿ.ದೇವೇಗೌಡ ಅವರು, ಎಚ್.ವಿಶ್ವನಾಥ್ ಅವರಿಗೆ ಬಿಟ್ಟುಕೊಡಬೇಕಾಯಿತು. ನಂತರದಲ್ಲಿ ಯುವ ಬ್ರಿಗೇಡ್ ತಣ್ಣಗಾಗಿತ್ತು.
ಲೋಕಸಭೆ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದಾಗ ಪ್ರಜ್ವಲ್ ಯುವ ಬ್ರಿಗೇಡ್ ಮತ್ತೆ ಸಕ್ರಿಯವಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಪ್ರಚಾರ ಆರಂಭಿಸಿದ ಪ್ರತಾಪ್ ಸಿಂಹ
ಬಿಜೆಪಿಯಲ್ಲಿ ಹಾಲಿ ಸದಸ್ಯ ಪ್ರತಾಪ್ ಸಿಂಹ ಈಗಾಗಲೇ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆ ಹಾಗೂ ಕಳೆದ ನಾಲ್ಕು ವರ್ಷಗಳಲ್ಲಿ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕಿರುಹೊತ್ತಿಗೆಯನ್ನೇ ಮಾಡಿಸಿ ಪ್ರಚಾರ ಆರಂಭಿಸಿದ್ದಾರೆ.
ಇವೆಲ್ಲವನ್ನು ಗಮನಿಸಿದರೆ ಮೈಸೂರು ಭಾಗದ ಲೋಕಸಭಾ ಟಿಕೆಟ್ ಗಾಗಿ ಸಖತ್ ಟಫ್ ಫೈಟ್ ನಡೆಯುವುದರಲ್ಲಿ ಸಂಶಯವೇ ಇಲ್ಲ.












Click it and Unblock the Notifications