Congress: ಪಾದಯಾತ್ರೆಗೆ ಸೆಡ್ಡು ಹೊಡೆಯಲು ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ ಜೆಡಿಎಸ್ ಮೈಸೂರು ಚಲೋ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿವೆ. ವಿಪಕ್ಷಗಳ ಹೋರಾಟಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ಮೈಸೂರಿನಲ್ಲಿ ನಾಳೆ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶ ಹಮ್ಮಿಕೊಂಡಿದ್ದು, 1 ಲಕ್ಷ ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸಿದ್ದರಾಮಯ್ಯ ಅವರ ಅಭಿಮಾನಿಗಳು ಕೂಡ ಭಾರಿ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಸಮಾವೇಶ ನಡೆಯುವ ಮಹಾರಾಜ ಕಾಲೇಜು ಮೈದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ್ದಾರೆ. ಶಾಮಿಯಾನದ ಮಾಲೀಕ ಷರೀಫ್ ಅವರು ಗಣ್ಯರು ಕೂರುವ ವೇದಿಕೆ, ಸಾರ್ವಜನಿಕರು ಆಸೀನರಾಗುವ ಜಾಗ, ಪ್ರವೇಶ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ವಿವರಿಸಿದರು. ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಿರುವುದು ಮತ್ತು ಆಸನ ವ್ಯವಸ್ಥೆ ಜಾಗದ ಬಗ್ಗೆ ವಿವರಣೆ ಕೇಳಿ ಪಡೆದುಕೊಂಡರು. ಸಿಎಂ ಅವರೇ ಪ್ರತಿಯೊಂದನ್ನು ಗಮನಿಸಿ ಮಾಹಿತಿ ಪಡೆದರಲ್ಲದೆ, ಧ್ವನಿವರ್ಧಕ ಎರಡು ಕಿಲೋ ಮೀಟರ್ ತನಕವೂ ಇರುವಂತೆ ಅಳವಡಿಸಲು ಸಲಹೆ ನೀಡಿದರು.
ಮೈಸೂರು, ಹಾಸನ, ಮಂಡ್ಯ, ಚಾಮರಾಜ ನಗರ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಂದ ಒಂದೂವರೆ ಲಕ್ಷ ಮಂದಿ ಕಾಂಗ್ರೆಸ್ ಸಮಾವೇಶಕ್ಕೆ ಬರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ಮಾಜಿ ಶಾಸಕರು, ಲೋಕಸಭಾ ಸದಸ್ಯರು, ಮಾಜಿ ಸಂಸದರು, ಎಲ್ಲಾ ಜಿಲ್ಲಾ, ನಗರ ಸಮಿತಿ ಅಧ್ಯಕ್ಷರು ಹಾಗೂ ಇನ್ನಿತರ ಕಾಂಗ್ರೆಸ್ ಪದಾಧಿಕಾರಿಗಳನ್ನು ಒಳಗೊಂಡಂತೆ 300ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳವರು. ಆಯಾ ಕ್ಷೇತ್ರದ ಶಾಸಕರು ಜನ ಸೇರಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ತಿಳಿಸಿದ್ದಾರೆ.
ವಿಪಕ್ಷ ನಾಯಕರಿಗೆ ಸಿದ್ದರಾಮಯ್ಯ ವಾರ್ನಿಂಗ್
ತಮ್ಮ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕೋಪಗೊಂಡಿದ್ದು ಸಮಾವೇಶದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಭ್ರಷ್ಟಾಚಾರಗಳನ್ನು ದಾಖಲೆ ಸಮೇತ ಬಿಚ್ಚಿಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ರಾಜ್ಯಪಾಲರ ನೋಟಿಸ್‌ಗೆ ನಾನು ಉತ್ತರ ಕೊಟ್ಟಿದ್ದೇನೆ, ದಾಖಲೆ ಸಮೇತ ಅವರಿಗೆ ವಿವರಣೆ ಕೊಟ್ಟಿದ್ದು, ಏನೇ ಬಂದರೂ ಎದುರಿಸಲು ನಾನು ಸಿದ್ದ ಎಂದು ಹೇಳಿದ್ದಾರೆ.












Click it and Unblock the Notifications