ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ ಆರೋಪ: ಉಪ್ಪು ಹಿಡಿದು ಪ್ರಮಾಣ ಮಾಡಿದ ಮಾವಿನಹಳ್ಳಿ ಸಿದ್ದೇಗೌಡ
ಮೈಸೂರು ಮೇ 11: ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಫಲಿತಾಂಶಕ್ಕೂ ಮುನ್ನವೇ ಚಾಮುಂಡೇಶ್ವರಿ ಕ್ಷೇತ್ರದ ಕದನ ತಾರಕ್ಕಕ್ಕೇರಿದೆ. ಮಾವಿನಹಳ್ಳಿ ಸಿದ್ದೇಗೌಡ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ ನಾನು ಯಾವ ಒಳ ಒಪ್ಪಂದ ಮಾಡಿಕೊಂಡಿಲ್ಲ. ಇದೆಲ್ಲಾ ಮೂಲ ಕಾಂಗ್ರೆಸ್ಸಿಗರ ಪಿತೂರಿ. ನಾನು ಗೆಲ್ಲುತ್ತೇನೆ ಎಂದು ಈ ರೀತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, ನಾನು ಖುದ್ದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ ಎಂದು ಉಪ್ಪನ್ನು ಮುಟ್ಟಿ ಮಾವಿನಹಳ್ಳಿ ಸಿದ್ದೇಗೌಡ ಪ್ರಮಾಣ ಮಾಡಿದ್ದಾರೆ.
500 ಜನರ ಗುಂಪು ಕಟ್ಟಿಕೊಂಡು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಳಾಗಲು ಮರಿಗೌಡ ಕಾರಣ. ಪ್ರತಿ ಗ್ರಾಮದಲ್ಲೂ ಮರಿಗೌಡನಿಂದ ಎರಡು ಮೂರು ಬಣ ಆಗಿದೆ. ಮರಿಗೌಡನಿಂದಲೇ ಈ ರೀತಿಯ ಗೊಂದಲ ಸೃಷ್ಟಿಯಾಗಿದೆ. ಜೆಡಿಎಸ್‌ನವರು ಇಂತಹ ಅವಕಾಶ ಬಳಕೆ ಮಾಡಿಕೊಂಡಿದ್ದಾರೆ. ಆದರೆ ನಾನು ಯಾರೋ ಒಬ್ಬ ವ್ಯಕ್ತಿಯನ್ನು ನಂಬಿ ಮೋಸ ಹೋದೆ ಎಂದಿದ್ದಾರೆ.

ಸಿದ್ದರಾಮಯ್ಯನವರಿಗೆ ಈ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಚುನಾವಣೆಯಲ್ಲಿ ಬಳಲಿ ಬಂದವರಿಗೆ ಪ್ರಶ್ನೆ ಕೇಳಿದಾಗ ಈ ರೀತಿ ಹೇಳಿದ್ದಾರೆ ಅಷ್ಟೇ. ನಾನು ಖುದ್ದು ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ. ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ.ಈಗಲೂ ನನಗೆ ಗೆಲುವಿನ ವಿಶ್ವಾಸವಿದೆ. ನನ್ನ ಗೆಲುವಿನ ಅಂತರ ಕಡಿಮೆ ಆಗಬಹುದು. ನಾನು ಒಂದು ಸಾವಿರ ಮತಗಳ ಅಂತರದಲ್ಲಾದರೂ ಗೆಲ್ಲುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ: ಜಿ.ಟಿ ದೇವೇಗೌಡ ಕಿಡಿ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಜೆಡಿಎಸ್ ಜೊತೆ ಹೊಂದಾಣಿಕೆ ಹಾಗೂ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ ದೇವೇಗೌಡ, ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಸಿದ್ದೇಗೌಡನ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಆದರೆ, ಆಗ ನಾನು ಹೇಳಿದ್ದನ್ನೆಲ್ಲಾ ಸಿದ್ದರಾಮಯ್ಯ ಮರೆತು ಹೋಗಿದ್ದಾರೆ. ಯಾರು ಈಗ ಏನೇ ಆರೋಪ ಮಾಡಿದರೂ, ನಾನು ಚಾಮುಂಡೇಶ್ವರಿ ಕ್ಷೇತ್ರದ ಜನರ ಆಶೀರ್ವಾದಿಂದ ಗೆಲ್ಲುತ್ತೇನೆ ಎಂದರು.
ನಾನು ಮಾವಿನಹಳ್ಳಿ ಸಿದ್ದೇಗೌಡನನ್ನು ಜೀವಮಾನದಲ್ಲಿ ಮಾತನಾಡಿಸಿಲ್ಲ. ಅಲ್ಲದೇ ಸಿದ್ದರಾಮಯ್ಯ ಜೀವನದುದ್ದಕ್ಕೂ ದ್ವೇಷದ ರಾಜಕಾರಣ ಮಾಡಿದರು. ಅವರಿಗಾಗಿ ಮರೀಗೌಡಗೆ ಸಾಕಷ್ಟು ದುಡಿದಿದ್ದರು. ಆದರೆ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಕೊಡಲಿಲ್ಲ.
ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣ ಗೊತ್ತಿಲ್ಲ. ನನ್ನ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎನ್ನುವುದು ಗೊತ್ತಿಲ್ಲ. ನನ್ನ ಜಾಯಮಾನದಲ್ಲಿ ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ ಎಂದು ಕಿಡಿಕಾರಿದರು.












Click it and Unblock the Notifications