ಮೈಸೂರು ಜಿಲ್ಲಾ ಪಂಚಾಯಿತಿ ಕೈವಶ
ಬೆಂಗಳೂರು, ಜು. 17 : ಮೈಸೂರು ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ನ ಪುಷ್ಪಾವತಿ ಅಮರನಾಥ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಸ್ವತಂತ್ರ್ಯ ಸದಸ್ಯ ಎಲ್.ಮಾದಪ್ಪ ಉಪಾಧ್ಯಕ್ಷರಾಗಿ ಬುಧವಾರ ಆಯ್ಕೆಯಾದರು.
ಬುಧವಾರ ನಡೆದ ಮೈಸೂರು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪುಷ್ಪಾವತಿ ಅವರು 28 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಎಚ್.ಆರ್.ಭಾಗ್ಯಲಕ್ಷ್ಮೀ ವಿರುದ್ಧ ಜಯಗಳಿಸಿದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು. ಹೊಸದಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಒಂದು ವರ್ಷ ಮತ್ತು ಏಳು ತಿಂಗಳು ಇದೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮತ್ತು ಉಪಾಧ್ಯಕ್ಷರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿಡಲಾಗಿತ್ತು. 46 ಸದಸ್ಯರ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 21, ಜೆಡಿಎಸ್ 16 ಮತ್ತು ಬಿಜೆಪಿ 8 ಸದಸ್ಯರ ಬಲ ಹೊಂದಿವೆ. ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾದಪ್ಪ ಅವರು ಸ್ವತಂತ್ರ ಸದಸ್ಯರಾಗಿದ್ದರು, ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. [ಬೆಂ-ಮೈಸೂರು ಜೋಡಿ ಮಾರ್ಗ ಮಾರ್ಚಿಗೆ ಪೂರ್ಣ]
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಮಾದಪ್ಪ ಅವರಿಗೆ 2 ಮತಗಳ ಕೊರತೆ ಇತ್ತು. ಜೆಡಿಎಸ್ ಪಕ್ಷದ ಆರು ಸದಸ್ಯರು ಮಾದಪ್ಪ ಅವರಿಗೆ ಬೆಂಬಲ ನೀಡಿದ್ದರಿಂದ ಅವರು ಉಪಾಧ್ಯಕ್ಷಗಾದಿಗೇರಿದ್ದಾರೆ. ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ಅವರು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕವನ್ನು ಅನುಮೋದಿಸಿದ್ದಾರೆ.












Click it and Unblock the Notifications