Karnataka Budget 2024: ತವರು ಜಿಲ್ಲೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೊಟ್ಟಿದ್ದೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ 2024-25ರಲ್ಲಿ ಮೈಸೂರಿಗೆ ಹಲವು ಕೊಡುಗೆಗಳನ್ನು ಘೋಷಿಸಿದ್ದಾರೆ. ಇವುಗಳಲ್ಲಿ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 43 ಮೀಸಲಿಡಲಾಗಿದೆ. ಇದಲ್ಲದೆ, ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಉನ್ನತ್ತೀಕರಣಕ್ಕೆ 54 ಕೋಟಿ ನೀಡಲಾಗಿದೆ. ಜೊತೆಗೆ ರಂಗಾಯಣ ಅಭಿವೃದ್ಧಿ ಹಾಗೂ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ಇದಲ್ಲದೆ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. . ಮೈಸೂರಿನ ಪ್ರಖ್ಯಾತ ಲ್ಯಾನ್ಸ್‌ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿಯೇ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಲಾಗಿದೆ.

ಪೆರಿಫೆರಲ್ ರಿಂಗ್ ರಸ್ತೆ
ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನದಟ್ಟಣೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಿಂಗ್ ರಸ್ತೆಯ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಬಜೆಟ್‌ನಲ್ಲಿ ತಿಳಿಸಲಾಗಿದೆ
ರನ್ ವೇ ವಿಸ್ತರಣೆಗೆ ಅನುದಾನ
ಮೈಸೂರು ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆಗೆ ನಮ್ಮ ಸರಕಾರ ಬಂದ ನಂತರ ಭೂಸ್ವಾಧೀನಕ್ಕೆ 126 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಾಗೂ ಪ್ರಸಕ್ತ ಸಾಲಿನಲ್ಲಿ ಬಾಕಿ 43 ಕೋಟಿ ರೂ. ಬಿಡುಗಡೆಗೊಳಿಸಿ, ಕಾಮಗಾರಿ ಪ್ರಾರಂಭಕ್ಕೆ ಕ್ರಮ ವಹಿಸಲು ಘೋಷಿಸಲಾಗಿದೆ
ಮಹಾರಾಣಿ ಕಾಲೇಜು ಉನ್ನತೀಕರಣ
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡವನ್ನು 54 ಕೋಟಿ ರೂ. ವೆಚ್ಚದಲ್ಲಿ ಹಾಗೂ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣವನ್ನು 116 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ
ಇತರ ಪ್ರಮುಖ ಘೋಷಣೆಗಳು
* ಮೈಸೂರಿನ ಕುಕ್ಕರಹಳ್ಳಿ ಬಳಿ ಹಾಗೂ ಕೆ.ಆರ್.ಎಸ್. ರಸ್ತೆ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ
* ಹುಣಸೂರು ಸೇರಿದಂತೆ ವಿವಿಧ ಕಡೆ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ಸ್ಥಾಪನೆ.
* ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ.
* ಮಹಾತ್ಮಾ ಗಾಂಧೀಜಿಯವರು ಭೇಟಿ ನೀಡಿದ್ದ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪ್ರೋತ್ಸಾಹಕ್ಕಾಗಿ ಕ್ರಮವಹಿಸಲಾಗುವುದು.
* ರಾಯಚೂರು ಮತ್ತು ಮೈಸೂರಿನ ಕೃಷಿ ಉತ್ಪನ್ನ ಸಮಿತಿಗಳಲ್ಲಿ ತಲಾ 40 ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹಗಳನ್ನು ನಿರ್ಮಿಸಲಾಗುವುದು.
* ಹುಣಸೂರು ತಾಲ್ಲೂಕಿನ ಮರದೂರು, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿಗೆ ಕ್ರಮ.












Click it and Unblock the Notifications