ಪ್ರಧಾನಿ ಮೋದಿ ಹೇಳಿದ ಅಚ್ಛೇ ದಿನ ಬರಲೇ ಇಲ್ಲ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಬಿಜೆಪಿ ಸರಕಾರ ಹಿಂದುಳಿದವರು, ದಲಿತರು, ಶ್ರಮಿಕ ವರ್ಗ ಶಕ್ತಿ ತುಂಬುವ ನಿಟ್ಟಿನಲ್ಲಿ ಯಾವುದೇ ಜನಪ್ರಿಯ ಯೋಜನೆ ನೀಡಿಲ್ಲ. ಮೋದಿಯವರು ಬರಲಿದೆ ಎಂದು ಹೇಳಿದ ಒಳ್ಳೆಯ (ಅಚ್ಛೆ) ದಿನ ಇದೇನಾ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ನಂಜನಗೂಡಿನಲ್ಲಿ ನಡೆದ ಬೃಹತ್ ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯುವಕರು, ಉದ್ಯೋಗ, ಮಹಿಳೆಯರು, ಶೂದ್ರರು, ದಲಿತರು, ಶ್ರಮಿಕರು, ದುಡಿಯುವವರ ಪರವಾದ ಯೋಜನೆಯನ್ನೇ ನೀಡದ ಬಿಜೆಪಿಯನ್ನು ತಿರಸ್ಕರಿಸಿ. ಈ ವರ್ಗಗಳಿಗೆ ವಿಶೇಷ ಆಸಕ್ತಿಯಿಂದ ಯೋಜನೆ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಸಾಲು ಪ್ರಶ್ನೆ ಕೇಳಿದ ಸಿದ್ದರಾಮಯ್ಯ
ಚುನಾವಣಾ ಬಾಂಡ್ ಮೂಲಕ ನೀವು ಸಂಗ್ರಹಿಸಿದ 7600 ಕೋಟಿ ಹಣಕ್ಕೆ ತೆರಿಗೆ ಕಟ್ಟಿದ್ದೀರಾ ಮೋದಿಯವರೇ? ಈಗ ಯಾರನ್ನು ಜೈಲಿಗೆ ಕಳುಹಿಸಬೇಕು ಹೇಳಿ ಮೋದಿಯವರೇ ಎಂದು ಪ್ರಶ್ನಿಸಿದರು.
ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮೋದಿಯವರು ಭಾಷಣ ಮಾಡಿದ್ದಾರೆ. ಆದರೆ, ದೇಶದಲ್ಲಿದ್ದ ಭ್ರಷ್ಟರೆಲ್ಲಾ ಈಗ ಯಾವ ಪಕ್ಷದಲ್ಲಿದ್ದಾರೆ ಎಂದು ಕೇಳಿದರು.
"ಐಟಿ, ಸಿಬಿಐ ದುರುಪಯೋಗ ಪಡೆಸಿಕೊಂಡು ಇಬ್ಬರು ಮುಖ್ಯಮಂತ್ರಿಗಳಾದ ಕೇಜ್ರಿವಾಲ್ ಮತ್ತು ಹೇಮಂತ್ ಸುರೇನ್ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ₹7600 ಕೋಟಿ ಹಣಕ್ಕೆ ಒಂದು ಪೈಸೆ ತೆರಿಗೆ ಕಟ್ಟಿಲ್ಲವಲ್ಲಾ ಈ ಹಗರಣಕ್ಕಾಗಿ ಯಾರನ್ನು ಜೈಲಿಗೆ ಕಳುಹಿಸಬೇಕು ಹೇಳಿ? ಎಂದರು.
ಬಿಜೆಪಿಗೆ ಮತ ಹಾಕುವ ಬಡವರೂ ಸೇರಿ ಇಡೀ ರಾಜ್ಯದ ಬಡವರು ಹೊಟ್ಟೆ ತುಂಬ ಊಟ ಮಾಡಲಿ ಅಂತ ನಾವು ಅಕ್ಕಿ ಕೊಟ್ಟೆವು. ಈ ಬಿಜೆಪಿಯವರು ಬಂದು ಕತ್ರಿ ಹಾಕಿಬಿಟ್ಟರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದು ಅಕ್ಕಿ ಕೊಡುತ್ತಿದ್ದೇವೆ. ಬಿಜೆಪಿ-ಜೆಡಿಎಸ್ ಇಬ್ಬರಿಗೂ ಜನಪರವಾದ ಸಿದ್ಧಾಂತ ಮತ್ತು ಬದ್ಧತೆ ಇಲ್ಲದಿರುವುದರಿಂದ ನಾಡಿನ ಜನತೆ ಎರಡೂ ಪಕ್ಷಗಳನ್ನು ತಿರಸ್ಕರಿಸಿದ್ದಾರೆ ಎಂದರು.
ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಆಕಾಶಕ್ಕೆ ಏರಿಸಿದ್ದೀರಲ್ಲಾ ಮೋದಿಯವರೇ? ಇದಾ ನಿಮ್ಮ ಅಭಿವೃದ್ಧಿ ಎಂದು ಪ್ರಶ್ನೆ ಮಾಡಿದರು.
ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಸಂಘ ಪರಿವಾರದ ಒಬ್ಬೇ ಒಬ್ಬನನ್ನು, ಬಿಜೆಪಿಯ ಒಬ್ಬ ದೇಶಕ್ಕಾಗಿ ಹುತಾತ್ಮರಾಗಿದ್ರೆ ತೋರಿಸಿ, ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ನೇರ ಸವಾಲು ಹಾಕಿದರು.












Click it and Unblock the Notifications