Mysuru Dasara Flowershow: ಕಣ್ಮನ ಸೆಳೆಯುತ್ತಿದೆ ದಸರಾ ಫಲಪುಷ್ಪ ಪ್ರದರ್ಶನ
ಅದ್ಧೂರಿ ಮೈಸೂರು ದಸರಾ ಆಚರಣೆಗೆ ಇಂದು ಚಾಲನೆ ಸಿಕ್ಕಿದೆ. ಸಾಹಿತಿ ಹಂ.ಪ. ನಾಗರಾಜಯ್ಯ ಈ ಬಾರಿ ಮೈಸೂರು ದಸರಾ ಆಚರಣೆಗೆ ಚಾಲನೆ ನೀಡಿದ್ದಾರೆ. ದಸರಾ ಪ್ರಯುಕ್ತ ತೋಟಗಾರಿಕಾ ಇಲಾಖೆ ಜಿಲ್ಲಾ ಪಂಚಾಯತ್ ಮೈಸೂರು ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ಫಲಪುಷ್ಪ ಪ್ರದರ್ಶನವನ್ನು ಕೂಡ ಆಯೋಜಿಸಿದ್ದು, ಸಿಎಂ ಸಿದ್ದರಾಮಯ್ಯ ಗುರುವಾರ ಉದ್ಘಾಟನೆ ಮಾಡಿದರು.
ಮೈಸೂರು ನಗರದ ನಗರದ ಕುಪ್ಪಣ್ಣ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಗಾಜಿನ ಮನೆಯೊಳಗೆ ನಿರ್ಮಿಸಿದ್ದಂತಹ ಶಾಕ್ಯ ರಾಜಮನೆತನ ಬೌದ್ಧ ಬೋಧನೆಗಳು ಹಾಗೂ ಬಸವಣ್ಣನವರ ಶ್ರೇಷ್ಠತೆ ಸಾರುವ ಅನುಭವ ಮಂಟಪ, ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪಿಸಿರುವ ಸಂಸತ್ ಭವನ ಪ್ರಮುಖ ಆಕರ್ಷಣೆಯಾಗಿದೆ.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗಳ ವಿಷಯಾಧಾರಿತವಾದ ಪುಷ್ಪ ಕಲಾಕೃತಿ ಮಾದರಿಗಳನ್ನು ನಿರ್ಮಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರಿನಲ್ಲಾದಂತಹ ಭದ್ರಾವತಿ ಕಾರ್ಖಾನೆ, ಶಿವನಸಮುದ್ರ ವಿದ್ಯುತ್ ಉತ್ಪಾದನೆ, ಮೈಸೂರು ವಿಶ್ವವಿದ್ಯಾಲಯ, ಹಾಗೂ ಮೈಸೂರು ಆಕಾಶವಾಣಿ ಸೇರಿದಂತೆ ಅಭಿವೃದ್ಧಿ ಸಾಧನೆಗಳ ಕುರಿತ ಪುಷ್ಪಗಳ ಮದ್ಯೆ ಇದ್ದಂತಹ ಚಿತ್ರ ಪ್ರದರ್ಶನ ನೋಡುಗರನ್ನು ಆಕರ್ಷಿಸಲಿದೆ.
ಏನೆಲ್ಲಾ ನೋಡಬಹುದು?
ಕುಪ್ಪಳ್ಳಿ ಪಾರ್ಕ್‌ನ ಮುಖ್ಯದ್ವಾರದಲ್ಲಿ ಇತ್ತೀಚಿಗೆ ಸಂಭ್ರಮಿಸಿದ ಕನ್ನಡಿಗರ ಹೆಮ್ಮೆಯ ಕರ್ನಾಟಕ ಸಂಭ್ರಮ 50 ರ ಕುರಿತು ಹಳದಿ ಮತ್ತು ಕೆಂಪು ಬಣ್ಣದ ಗುಲಾಬಿ ಹೂವಿನಿಂದ ನಿರ್ಮಿಸಲಾದ ಕರ್ನಾಟಕ ಭೂಪಟ, ಎಡ ಬಲದಲ್ಲಿ ಆನೆಯ ಮಾದರಿ, ಅಲ್ಲದೆ ಹೂವಿನಿಂದ ಅರಳಿದ ಟೀಮ್ ಇಂಡಿಯಾ ವಿಶ್ವಕಪ್ ಮಾದರಿಯು ಜನರ ಗಮನ ಸೆಳೆಯುತ್ತಿದೆ.
ಭಾರತದ ಮೊದಲ ಮಹಿಳಾ ಶಿಕ್ಷಕಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ಒಂದೇ ಮಾನವನ ದೇಹದಲ್ಲಿ ಅರ್ಧಭಾಗ ರೈತ ಇನ್ನರ್ಧ ಭಾಗ ಗಡಿ ಕಾಯುವ ಸೈನಿಕನ ಮಾದರಿ ಕೂಡ ವಿಶೇಷವಾಗಿದೆ.
ಹುಲಿಯನ್ನೇರಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ಹಾಗೂ ಒಂದೇ ಗೋಪುರದಲ್ಲಿ ಅರಳಿದ ಕರ್ನಾಟಕದ ಅತೀ ದೊಡ್ಡ ದೇವಾಲಯವಾದ ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿರುವುದು ಭಕ್ತಿಭಾವ ಮೂಡಿಸುತ್ತಿವೆ.
ವಿಭಿನ್ನ ಕಲ್ಪನೆಗಳೊಂದಿಗೆ ಈ ಬಾರಿಯ ಫಲಪುಷ್ಪ ಪ್ರದರ್ಶನ ಸಜ್ಜಾಗಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಬರುವ ಪ್ರೇಕ್ಷಕರಿಗೆ ವಿವಿಧ ರೀತಿಯ ತಿಂಡಿ ತಿನಿಸುಗಳು, ಆಟಿಕೆಗಳ ವ್ಯವಸ್ಥೆ ಮಾಡಲು ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಮಳಿಗೆಗಳನ್ನು ತೆರೆಯಲಾಗಿದೆ.












Click it and Unblock the Notifications