ಸೋಲಿನ ಬೆನ್ನಲ್ಲೇ ಜೆಡಿಎಸ್ ಮುಗಿಸಲು ಇಬ್ರಾಹಿಂ ಮಾಸ್ಟರ್ ಪ್ಲ್ಯಾನ್! ಏನದು?
ಸಿಎಂ ಇಬ್ರಾಹಿಂ ಅವರು ಜೆಡಿಎಸ್‌ನಲ್ಲಿ ಮೊದಲಿನಿಂದಲೂ ಅಸಮಾಧಾನ ಹೊರಹಾಕಿದ್ದವರು. ಇದೇ ಕಾರಣಕ್ಕೆ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಸದ್ಯ ಚನ್ನಪಟ್ಟಣ ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರೋ ಜೆಡಿಎಸ್‌ಗೆ ದೊಡ್ಡ ಶಾಕ್ ನೀಡಲು ಸಿಎಂ ಇಬ್ರಾಹಿಂ ಮುಂದಾಗಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿರುವ ಅವರು, ಜೆಡಿಎಸ್‌ನಲ್ಲಿ ಅಸಮಾಧಾನಕ್ಕೆ ಒಳಗಾಗಿರುವ ಶಾಸಕರನ್ನೆಲ್ಲ ಒಗ್ಗೂಡಿಸಿ, ಒಂದು ತಂಡ ರಚಿಸಲು ನಿರ್ಧರಿಸಿರುವ ಸುಳಿವು ನೀಡಿದ್ದಾರೆ. ಜೆಡಿಎಸ್ ವಿಚಾರದಲ್ಲಿ ಸುಮಾರು 13 ಶಾಸಕರು ಅಸಮಾಧಾನಗೊಂಡಿದ್ದಾರೆ. ಜಿ.ಟಿ.ದೇವೇಗೌಡರೂ ಸೇರಿ ಹಲವರು ಸಾಕಷ್ಟು ನೋವು ನುಂಗಿಕೊಂಡಿದ್ದಾರೆ. ಈಗ ಅವರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಇಬ್ರಾಹಿಂ ಹೇಳಿದ್ದಾರೆ.

ಅಲ್ಲದೆ ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿಯನ್ನು ನಾನು ಹೊತ್ತಿದ್ದೇನೆ. ಈಗ ಅಸಮಾಧಾನಿತರೆಲ್ಲ ಜೆಡಿಎಸ್‌ನಲ್ಲೇ ಇರಬೇಕಾ? ಅಥವಾ ಬೇಡವಾ? ಎಂಬುದನ್ನು ನಿರ್ಧಾರ ಮಾಡುತ್ತೇವೆ. ಅಥವಾ ಜೆಡಿಎಸ್‌ನಲ್ಲೇ ತೃತೀಯ ರಂಗಕ್ಕೆ ಬೇರೆ ಹೆಸರು ಕೊಡುವುದಾ ಎಂಬುದರ ಬಗ್ಗೆಯೂ ಚರ್ಚೆ ನಡೆಸುತ್ತೇವೆ ಎಂದು ಇಬ್ರಾಹಿಂ ಸುಳಿವು ನೀಡಿದ್ದಾರೆ.
ಜೆಡಿಎಸ್ ಶಾಸಕರು ಈಗಿರುವ ಪರಿಸ್ಥಿತಿಯಲ್ಲಿ ತಮ್ಮ ತಮ್ಮ ಕ್ಷೇತ್ರಗಳನ್ನು ರಕ್ಷಿಸಿಕೊಳ್ಳಬೇಕು. ಈಗ ಜೆಡಿಎಸ್ ಮನೆಗೆ ಬೆಂಕಿ ಬಿದ್ದಿದೆ. ಈ ಕಾರಣದಿಂದಲೇ ಜೆಡಿಎಸ್‌ನ ಒಬ್ಬೊಬ್ಬರೇ ತಮ್ಮ ನೋವನ್ನು ಬಹಿರಂಗಪಡಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಸ್ಥಿತಿ ಏನಾಗಿದೆ. ಇದರಿಂದಾದರೂ ಹೆಚ್.ಡಿ.ಕುಮಾರಸ್ವಾಮಿ ಬುದ್ಧಿ ಕಲೀಬೇಕು. ಫ್ಯಾಮಿಲಿ ಕಂಪನಿಯಾಗಿ ಬೆಳೆಸೋದನ್ನು ಜೆಡಿಎಸ್ ಪಕ್ಷ ಇನ್ನಾದರೂ ಬಿಡಬೇಕು. ಇದು ನಡೆದರೆ ಮಾತ್ರವೇ ಜೆಡಿಎಸ್ ಉಳಿಯುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಬಸ್ ನಿಲ್ದಾಣದಲ್ಲಿ ನಿಂತ ಬಸವಿಯಂತಾಗಿದೆ ಜೆಡಿಎಸ್‌ನ ಸದ್ಯದ ಸ್ಥಿತಿ. ಜೆಡಿಎಸ್ ಈಗಾಗಲೇ ಬಿಜೆಪಿ ಪಕ್ಷವನ್ನು ಲವ್ ಮಾಡಿದ್ದು ಆಗಿದೆ. ಈಗ ಅವರನ್ನ ಅಲ್ಲೇ ಬಿಟ್ಟರೆ ಒಳ್ಳೆಯದು ಎಂದು ವ್ಯಂಗ್ಯ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಈ ಹಿಂದೆ ನಾನು ಕುಮಾರಸ್ವಾಮಿ ಜೊತೆ ಇದ್ದಾಗ ಚುನಾವಣೆಯಲ್ಲಿ ನಾಲ್ಕು ಕೋಟಿ ಖರ್ಚು ಮಾಡಿ ಗೆದ್ದಿದ್ದೆವು. ಈಗ ನಾನು ಅವರೊಂದಿಗೆ ಇಲ್ಲ. ಅವರು ನೂರಾರು ಕೋಟಿ ಖರ್ಚು ಮಾಡಿದರೂ ಚನ್ನಪಟ್ಟಣದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಇತ್ತೀಚಿನ ಚನ್ನಪಟ್ಟಣ ಉಪಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ.

ಅಲ್ಲದೆ ಚನ್ನಪಟ್ಟಣಕ್ಕೆ ಮುಸ್ಲಿಂ ಸಮುದಾಯದವರು ಬರದಿದ್ದರೆ ಜೆಡಿಎಸ್‌ಗೆ ಒಂದು ಸ್ಥಾನ ಕೂಡ ಬರೋದಿಲ್ಲ. ಈ ಹಿಂದೆ 19 ಮಂದಿ ಗೆದ್ದಿದ್ದು ಮುಸ್ಲಿಂ ಸಮುದಾಯದಿಂದಲೇ ಎನ್ನುವುದು ಈಗ ಮತ್ತೆ ರುಜುವಾತಾಗಿದೆ. ಈಗ ಅಸಮಾಧಾನಿತರೆಲ್ಲ ಕಾಂಗ್ರೆಸ್‌ಗೆ ಹೋಗುವ ನಿರ್ಧಾರ ತೆಗೆದುಕೊಂಡಿಲ್ಲ. ಜೆಡಿಎಸ್‌ನಲ್ಲೇ ಮತ್ತೊಂದು ಬಣ ಹುಟ್ಟುಹಾಕುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ.
ನಿಖಿಲ್ ಬಗ್ಗೆ ಇಬ್ರಾಹಿಂ ವ್ಯಂಗ್ಯ
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಮಾತನಾಡಿದ್ದ ಇಬ್ರಾಹಿಂ ಅವರು, ಅಪ್ಪಾ ನಿಖಿಲಾ... ಎಷ್ಟಿದ್ದಾರಪ್ಪ ಅಲ್ಪಸಂಖ್ಯಾತರು? ನಿಖಿಲಾ... ರಾಮನಗರದಲ್ಲಿ ನಿಮ್ಮ ತಾತನಿಗೆ ಅಲ್ಪಸಂಖ್ಯಾತರು ಮತ ಕೊಟ್ಟಿದ್ದಕ್ಕೆನೇ ಸಿಎಂ ಆಗಿದ್ದು. ಅವರು ಪ್ರಧಾನಿ ಆದಾಗಲೂ ಅಲ್ಪಸಂಖ್ಯಾತರ ಕೃಪೆ ಇದೆ ಎಂದು ವ್ಯಂಗ್ಯ ಮಾಡಿದ್ದರು.
ಚನ್ನಪಟ್ಟಣದಲ್ಲಿ ಮುಸ್ಲಿಂ ಜನ ಮತ ಕೊಟ್ಟಿದ್ದಕ್ಕೆ ನಿಮ್ಮ ತಾತ ದೇವೇಗೌಡರು ಮುಖ್ಯಮಂತ್ರಿ ಆದರು. ಅವರು ಪ್ರಧಾನಿಯಾದಾಗ ನೀನಿನ್ನೂ ಹುಟ್ಟೇ ಇರಲಿಲ್ಲ. ನೀನಿನ್ನೂ ಬೆಳೆಯೋ ಹುಡುಗ. ಚುನಾವಣೆಯಲ್ಲಿ ನಿನ್ನ ಸ್ಥಿತಿ ನೋಡಿ ಅಯ್ಯೋ ಅನಿಸಿತು. ಇಷ್ಟು ಚಿಕ್ಕ ವಯಸ್ಸಿಗೆ ಈ ರೀತಿ ಆಗಬಾರದಿತ್ತು ಎಂದು ಇಬ್ರಾಹಿಂ ಲೇವಡಿ ಮಾಡಿದ್ದರು.












Click it and Unblock the Notifications