ಚಾಮುಂಡಿ ಬೆಟ್ಟದಲ್ಲಿ ಅನಧಿಕೃತ ನಿವಾಸಿಗಳನ್ನು ತೆರವುಗೊಳಿಸಿ: ಸಂಸದ ಪ್ರತಾಪ್ ಸಿಂಹ
ಮೈಸೂರು, ಜುಲೈ 19: ಚಾಮುಂಡಿ ಬೆಟ್ಟದ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಬೆಟ್ಟದಲ್ಲಿ ಅನಧಿಕೃತವಾಗಿ ನೆಲೆಸಿರುವವರನ್ನು ತೆರವುಗೊಳಿಸಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯದ ಅರ್ಚಕ ಸಮುದಾಯ ಹಾಗೂ ನಾಯಕ ಸಮುದಾಯಕ್ಕೆ ಸೇರಿದ ಮೂಲ ನಿವಾಸಿಗಳನ್ನು ಹೊರತುಪಡಿಸಿ, ಇತ್ತೀಚೆಗೆ ಎಲ್ಲಿಂದಲೋ ಬಂದು ಬೆಟ್ಟದಲ್ಲಿ ನೆಲೆಸಿರುವವರನ್ನು ತೆರವುಗೊಳಿಸಬೇಕು. ಬೆಟ್ಟದ ಮೇಲ್ಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಚಾಮುಂಡಿ ಬೆಟ್ಟಕ್ಕೆ ಪ್ರತ್ಯೇಕ ಪ್ರಾಧಿಕಾರ ಮಾಡಿರುವುದು ಸ್ವಾಗತಾರ್ಹ. ದೇವಸ್ಥಾನದ ಮುಂಭಾಗದಲ್ಲಿ ಮಂಟಪ ಕಟ್ಟುವ ಅಗತ್ಯವಿರಲಿಲ್ಲ. ಬೆಟ್ಟದ ಮೇಲ್ಬಾಗದಲ್ಲಿ ಬೆಂಗಳೂರಿನ ಕೆಲವರು ಆಸ್ತಿ ಮಾಡಿಕೊಂಡಿದ್ದಾರೆ. ಸಬ್ ಲೀಸ್ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಬೆಟ್ಟಕ್ಕೆ ಸಂಬಂಧ ಪಡದವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದರು.
ಈಗಾಗಲೇ ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 45 ಕೋಟಿ ರೂಪಾಯಿ ಅನುದಾನ ಬಂದಿದೆ. ಹೀಗಾಗಿ ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ಕಳೆದ 5 ತಿಂಗಳು ರಾಜಕಾರಣದಲ್ಲಿ ವೇಸ್ಟ್ ಮಾಡಿದ್ದೇವೆ. ಇನ್ನುಳಿದ ಸಮಯದಲ್ಲಾದರೂ ಅಭಿವೃದ್ಧಿಯತ್ತ ಚಿಂತನೆ ಮಾಡೋಣ. ಜನರಿಗೆ ಉಪಯೋಗವಾಗುವಂತಹ ಕೆಲಸಗಳಿಗೆ ಮಾನ್ಯತೆ ಕೊಡೋಣ ಎಂದು ಹೇಳಿದರು.
ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಮಾಡಿದಂತೆ ದಸರಾ ಆಚರಣೆಗೂ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕಿತ್ತು. ಬಹಳ ವರ್ಷಗಳಿಂದ ದಸರಾ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲೂ ಇದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಈಗಿನ ಸರ್ಕಾರದವರು ದಸರಾ ಪ್ರಾಧಿಕಾರ ರಚನೆ ಮಾಡಲಿ ಎಂದು ಒತ್ತಾಯಿಸಿದರು.
ಇನ್ನು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟದ ಮಹಾಘಟ ಬಂಧನ್ ಸಭೆಯ ಕುರಿತು ಪ್ರತಿಕ್ರಿಯಿಸಲು ಸಂಸದ ಪ್ರತಾಪ್ ಸಿಂಹ ನಿರಾಕರಿಸಿದ್ದಾರೆ.












Click it and Unblock the Notifications