ಸ್ವಚ್ಛನಗರಿ ಮೈಸೂರಿಗೊಂದು ಕಪ್ಪು ಚುಕ್ಕೆ ಸಬ್ ವೇ
ಮೈಸೂರು, ಫೆಬ್ರವರಿ 22 : ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸದ ಗುಡ್ಡೆ, ಕುಡಿದು ಎಸೆದ ಸಾರಾಯಿ ಬಾಟಲಿಗಳು, ಚಿಂದಿ ಬಟ್ಟೆಗಳು. ಮೈಸೂರು ನಗರಕ್ಕೆ 'ಸ್ವಚ್ಛನಗರಿ' ಎಂದು ಪ್ರಶಸ್ತಿ ನೀಡಿದವರು ಅರಮನೆ ಮುಂಭಾಗದಲ್ಲಿರುವ ಸುರಂಗ ಮಾರ್ಗದೊಳಗೆ ಇಣುಕಿ ನೋಡಿದರೆ ಹೌಹಾರುವುದಂತು ಖಚಿತ.
ಮೈಸೂರು ಅರಮನೆ ಮುಂಭಾಗದಲ್ಲಿ ಸದಾ ವಾಹನಗಳ ದಟ್ಟಣೆ ಜೊತೆಗೆ ದಸರಾ ಸಮಯದಲ್ಲಿ ವಸ್ತು ಪ್ರದರ್ಶನದ ಕಡೆಗೆ ರಸ್ತೆ ದಾಟಲು ಅನುಕೂಲವಾಗಲು ಸುರಂಗ ಮಾರ್ಗ ನಿರ್ಮಿಸಲಾಗಿದೆ. ಉತ್ತಮ ಉದ್ದೇಶದಿಂದ ನಿರ್ಮಾಣವಾದ ಸಬ್‍ವೇ ಈಗ ಜನರ ಅನುಕೂಲಕ್ಕೆ ಬಾರದೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. [ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿಯಿಂದ ವಸ್ತು ಪ್ರದರ್ಶನ ಕೇಂದ್ರದ ಆವರಣಕ್ಕೆ ಸಂಪರ್ಕ ಕಲ್ಪಿಸುವ ಈ ಸಬ್ ವೇಯನ್ನು ಮೈಸೂರು ಮಹಾನಗರ ಪಾಲಿಕೆ 2008ರಲ್ಲಿ ನಿರ್ಮಾಣ ಮಾಡಿದೆ. ಆದರೆ, ಇದರ ಸ್ವಚ್ಛತೆ ಬಗ್ಗೆ ಮಾತ್ರ ಯಾವುದೇ ಅಧಿಕಾರಿಗಳು ಗಮನಹರಿಸಿಲ್ಲ. [ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]
ಮಳೆ ಬಂದರೆ ನೀರು ತುಂಬಿಕೊಳ್ಳುವ ಈ ಸಬ್‌ವೇಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಹಲವು ಸಂಘಟನೆಗಳು ಪ್ರತಿಭಟನೆಯನ್ನು ಮಾಡಿವೆ. ಆದರೆ, ಸಬ್ ವೇ ಮಾತ್ರ ಸ್ವಚ್ಛಗೊಂಡಿಲ್ಲ. ಸಬ್ ವೇ ಚಿತ್ರಗಳನ್ನು ನೋಡಿ....

ಮೈಸೂರಿಗೊಂದು ಕಪ್ಪುಚುಕ್ಕೆ ಸಬ್ ವೇ
ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಪಟ್ಟಿಯಲ್ಲಿ ಮೈಸೂರು ದೇಶದಲ್ಲೇ ಸ್ವಚ್ಛನಗರ ಎಂಬ ಪಟ್ಟ ಪಡೆದಿದೆ. ಆದರೆ, ಅರಮನೆ ಮುಂಭಾಗದಲ್ಲಿರುವ ಸುರಂಗ ಮಾರ್ಗದೊಳಗೆ ಇಣುಕಿ ನೋಡಿದವರು ಸ್ವಚ್ಛನಗರಿ ಪಟ್ಟ ಯಾರು ಕೊಟ್ಟರು ಎಂದು ಆಶ್ಚರ್ಯಪಡಬೇಕಾಗುತ್ತದೆ.

ಅನೈತಿಕ ಚಟುವಟಿಕೆಗಳ ತಾಣ
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿಯಿಂದ ವಸ್ತು ಪ್ರದರ್ಶನ ಕೇಂದ್ರದ ಆವರಣಕ್ಕೆ ಸಂಪರ್ಕ ಕಲ್ಪಿಸುವ ಸಬ್ ವೇಯಲ್ಲಿ ಸ್ಚಚ್ಛತೆ ಮರೆಯಾಗಿದೆ. ಜನರ ಉಪಯೋಗಕ್ಕೆ ಬರಬೇಕಾದ ಸಬ್ ವೇ ಅನೈತಿಕ ಚ ಟುವಟಿಕೆಗಳ ತಾಣವಾಗಿದೆ.

ದುರ್ನಾತ ಮೂಗಿಗೆ ಬಡಿಯುತ್ತದೆ
ಸಬ್ ವೇಯೊಳಗೆ ಕಾಲಿಟ್ಟರೆ ಪ್ಲಾಸ್ಟಿಕ್, ಕಸದ ಗುಡ್ಡೆ, ಕುಡಿದು ಎಸೆದ ಸಾರಾಯಿ ಬಾಟಲಿಗಳು, ಚಿಂದಿ ಬಟ್ಟೆಗಳು ನಿಮ್ಮನ್ನು ಸ್ವಾಗತಿಸುತ್ತವೆ. ದುರ್ನಾತ ಮೂಗಿಗೆ ಬಡಿಯುತ್ತದೆ. ಸಬ್ ವೇ ಮೂಲಕ ರಸ್ತೆ ದಾಟಲು ಅದರೊಳಗೆ ಇಳಿದವರು ವಾಂತಿ ಮಾಡಿಕೊಳ್ಳದಿದ್ದರೆ ಅಷ್ಟೇ ಸಾಕು.

1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ
2008ರಲ್ಲಿ ಮೈಸೂರು ಮಹಾನಗರ ಪಾಲಿಕೆ 1 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಈ ಸಬ್ ವೇ ನಿರ್ಮಾಣ ಮಾಡಿದೆ. ಈ ಸಬ್ ವೇ ಇದೀಗ ದುಸ್ಥಿತಿಗೆ ತಲುಪಿದ್ದು, ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.

ಸಬ್ ವೇ ಸ್ವಚ್ಛತೆಗೆ ವಿನೂತನ ಪ್ರತಿಭಟನೆ
ಸಬ್ ವೇಯನ್ನು ಸ್ವಚ್ಛಗೊಳಿಸಲು ಆಗ್ರಹಿಸಿ ವಿವಿಧ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿವೆ. ಮೈಸೂರು ರಕ್ಷಣಾ ವೇದಿಕೆ ಸಬ್ ವೇಗೆ 'ಶೌಚಾಲಯ' ಎಂದು ಮರು ನಾಮಕರಣ ಮಾಡಿ ಟೇಪು ಕತ್ತರಿಸಿ ಪ್ರತಿಭಟನೆ ನಡೆಸಿತ್ತು. ಆದರೆ, ಸಬ್ ವೇ ಮಾತ್ರ ಇನ್ನೂ ಸ್ವಚ್ಛಗೊಂಡಿಲ್ಲ.












Click it and Unblock the Notifications