ಮೈಸೂರಿನಲ್ಲಿ ಮೈ ಕೊರೆಯುವ ಚಳಿ: ಆರೋಗ್ಯ ಕಾಳಜಿ ಬಗ್ಗೆ ವೈದ್ಯರಿಂದ ಸಲಹೆ
ಮೈಸೂರು, ಜನವರಿ 17: ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲೇ ದಾಖಲೆಯ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಮೈಸೂರಿಗರು ಚಳಿಗೆ ನಡುಗುತ್ತಿದ್ದಾರೆ. ಈ ನಡುವೆ ವೈದ್ಯರು ಆರೋಗ್ಯ ಕಾಳಜಿ ವಹಿಸುವಂತೆ ನಾಗರಿಕರಿಗೆ ಕಿವಿಮಾತು ಹೇಳಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ವರ್ಷ ಹೆಚ್ಚು ಚಳಿ ಇದ್ದು ಜನರನ್ನು ಥರಗುಡುವಂತೆ ಮಾಡಿದೆ. ಮಂಗಳವಾರ ಕನಿಷ್ಠ ಉಷ್ಣಾಂಶ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಈ ಬಗ್ಗೆ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ.ಪ್ರಕಾಶ್ ಮಾತನಾಡಿದ್ದು, ಉತ್ತರದಲ್ಲಿ ಹೆಚ್ಚಿನ ಶೀತ ಗಾಳಿ ಬೀಸುತ್ತಿರುವುದರಿಂದ ಕನಿಷ್ಠ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಇನ್ನು ಕೆಲವು ದಿನಗಳವರೆಗೂ ಇದೇ ಪರಿಸ್ಥಿತಿ ಮುಂದವರಿಯಲಿದ್ದು, ಫೆಬ್ರವರಿ ನಂತರ ಉಷ್ಣಾಂಶ ಸಹಜಸ್ಥಿತಿಗೆ ಬರಲಿದೆ ಎನ್ನುತ್ತಾರೆ.

ಮಕರ ಸಂಕ್ರಾಂತಿಯ ದಿನ 9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಸಾಮಾನ್ಯವಾಗಿ ಪ್ರತಿವರ್ಷ ಡಿಸೆಂಬರ್ ಹಾಗೂ ಜನವರಿಯಲ್ಲಿ ತಿಂಗಳಿನಲ್ಲಿ 12ರಿಂದ 13 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತದೆ. ಆದರೆ, ಕಳೆದ ಎರಡು ಮೂರು ವರ್ಷದಿಂದ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಜನವರಿ 11ರಂದು 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಮೂರು ವರ್ಷಕ್ಕೆ ಹೋಲಿಸಿದರೆ ಅತಿ ಕಡಿಮೆ. 2022ರ ಜನವರಿ 30ರಂದು ಕನಿಷ್ಠ ಉಷ್ಣಾಂಶ 12.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಜ.12ರಂದು 10.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಜ.13ರಂದು 9 ಡಿಗ್ರಿ ಹಾಗೂ ಜ.14ರಂದು 9.4 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ದಾಖಲಾಗಿದೆ. ಜ.15 ಮಕರ ಸಂಕ್ರಾಂತಿ ಹಬ್ಬದಲ್ಲೂ 9 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದ್ದು, ಜನರು ಚಳಿಯಿಂದ ಥರಗುಡುತ್ತಿದ್ದಾರೆ.

ನೆಗಡಿ, ಶೀತ, ಕೆಮ್ಮು, ಜ್ವರ ಆತಂಕ
ಬದಲಾದ ವಾತಾವರಣದಿಂದ ಮೈಸೂರಿನಲ್ಲಿ ಚಳಿ ಹೆಚ್ಚಿದೆ. ಈ ಸಮಯದಲ್ಲಿ ಮಕ್ಕಳು ಹಾಗೂ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ನೆಗಡಿ, ಶೀತ, ಕೆಮ್ಮು, ಜ್ವರ ಹೆಚ್ಚಿನ ಜನರನ್ನು ಬಾಧಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ದೇಹವನ್ನು ಬೆಚ್ಚಗಿರಿಸಿಕೊಳ್ಳಲು ಸ್ವೆಟರ್, ಕಿವಿಗೆ ಹತ್ತಿ ಹಾಕಿಕೊಳ್ಳಬೇಕು. ಕುದಿಸಿ ಆರಿಸಿದ ನೀರು ಕುಡಿಯಬೇಕು ಎಂದು ಡಿಎಚ್‌ಒ ಡಾ.ಪ್ರಸಾದ್ ಜನರಲ್ಲಿ ಮನವಿ ಮಾಡಿದ್ದಾರೆ.

ಸಂಜೆಯಾಗುತ್ತಿದಂತೆ ಮೈ ಕೊರೆಯುವ ಚಳಿ
ಚಳಿಯ ಪರಿಣಾಮ ಕಪಾಟಿನ ಮೂಲೆ ಸೇರಿದ್ದ ಬೆಚ್ಚಗಿನ ಉಡುಪುಗಳು ಹೊರ ಬರುತ್ತಿವೆ. ಚಳಿಯಿಂದಾಗಿ ಬೆಳಗಿನ ವಾಯು ವಿಹಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂಜಾನೆ ಎದ್ದು ನಗರದ ಕುಕ್ಕರಹಳ್ಳಿ ಕೆರೆ, ಲಿಂಗಾಂಬುದಿ ಕೆರೆ ಸೇರಿದಂತೆ ವಿವಿಧೆಡೆ ವಾಯುವಿಹಾರ, ಜಾಗಿಂಗ್‌ಗೆ ಬರುವ ಜನರ ಸಂಖ್ಯೆ ಒಂದಷ್ಟು ಕಡಿಮೆಯಾಗುತ್ತಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಚಳಿ ಮತ್ತಷ್ಟು ಹೆಚ್ಚಿದೆ. ಬೆಳಗ್ಗೆ ಸೂರ್ಯನ ಕಿರಣಗಳು ಬೀಳುವವರೆಗೂ ಜನ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಬೆಳಗ್ಗೆ 11 ಗಂಟೆ ನಂತರ ಸುಡು ಬಿಸಿಲು ಬಂದರೆ ಸಂಜೆಯಾಗುತ್ತಿದ್ದಂತೆ ನಿಧಾನವಾಗಿ ಮೈ ಕೊರೆಯುವ ಚಳಿ ಶುರುವಾಗುತ್ತಿದೆ.

ಮೈಸೂರು ಭಾಗದಲ್ಲಿ ಹೆಚ್ಚಿದ ಚಳಿ
ಮೈಸೂರಿನಲ್ಲಿ ವರ್ಷದಿಂದ ವರ್ಷಕ್ಕೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ಚಳಿಯ ಆರ್ಭಟ ಜನ ಜೀವನದ ಮೇಲೂ ಪರಿಣಾಮ ಬೀರಿದೆ. ರಾತ್ರಿ 10ರ ಬಳಿಕ ಹೆಚ್ಚಾಗುವ ಚಳಿ ಬೆಳಗ್ಗೆ 9 ಗಂಟೆಯಾದರೂ ಬಿಡುವುದಿಲ್ಲ. ರಸ್ತೆಯ ತುಂಬೆಲ್ಲಾ ಮಂಜು ತುಂಬಿರುತ್ತದೆ. ಹೆಡ್‌ಲೈಟ್ ಹಾಕಿಕೊಂಡೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಉತ್ತರದಿಂದ ತಣ್ಣನೆ ಗಾಳಿ ಬೀಸುತ್ತಿರುವುದರಿಂದ ಮೈಸೂರು ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ