ಒಡಿಶಾ ಫೋನಿ ಸಂತ್ರಸ್ತರಿಗೆ ಸಿಎಫ್‌ಟಿಆರ್‌ಐನಿಂದ ಆಹಾರ
ಮೈಸೂರು, ಮೇ 5: ಒಡಿಶಾದಲ್ಲಿ ಫೋನಿ ಚಂಡಮಾರುತ ಜನರನ್ನು ಬೆಚ್ಚಿ ಬೀಳಿಸಿದೆ. ನೀರು ಹಾಗೂ ಆಹಾರ ಸಿಗದೆ ಅಲ್ಲಿನ ಜನರು ಕಂಗಲಾಗಿದ್ದಾರೆ. ನೀರಿನ ಮಧ್ಯೆಯೇ ಇದ್ದರೂ ಕುಡಿಯಲು ಶುದ್ಧ ನೀರಿಲ್ಲ.
ಇದನ್ನು ಮನಗಂಡ ರಾಜ್ಯದ ಕೇಂದ್ರೀಯ ಆಹಾರ ನಿಗಮ ( ಸಿ ಎಫ್ ಟಿ ಆರ್ ಐ ) ಜನರಿಗೆ ಆಹಾರವನ್ನು ಸಮರ್ಪಕವಾಗಿ ಪೂರೈಸಲು ಈಗಾಗಲೇ ಸಿದ್ಧತೆ ನಡೆಸಿದೆ.
ಈಗಾಗಲೇ ಹಲವೆಡೆ ಉತ್ತಮ ಗುಣಮಟ್ಟದ ಆಹಾರ ಪೊಟ್ಟಣಗಳನ್ನು ಪೂರೈಸಿದ್ದ ಸಿ ಎಫ್ ಟಿ ಆರ್ ಐ , ಇದೀಗ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾಕ್ಕೆ ಸಂಸ್ಕರಿಸಿದ ಆಹಾರದ ಪಟ್ಟಣಗಳನ್ನು ರವಾನಿಸಲು ನೂರಾರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ತಯಾರಿ ನಡೆಯುತ್ತಿದೆ.

ಮಸಾಲೆ ಅವಲಕ್ಕಿ, ಉಪ್ಪಿಟ್ಟು, ಚಪಾತಿ, ಟೊಮೆಟೋ ಚಟ್ನಿ, ಹೈ ಪ್ರೋಟಿನ್ ಬಿಸ್ಕತ್, ರಸ್ಕ್ ಸೇರಿದಂತೆ 200-250 ಗ್ರಾಂ ತೂಕದ ನಾನಾ ಆಹಾರ ಪದಾರ್ಥಗಳು ಈಗಾಗಲೇ ತಯಾರಾಗುತ್ತಿದೆ. ಸೋಮವಾರ (ಮೇ 6) ಮೈಸೂರಿನಿಂದ ಆಹಾರ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದು, ಸಾಧ್ಯವಾದಲ್ಲಿ ವಿಶೇಷ ವಿಮಾನದ ಮೂಲಕ ಆಹಾರ ಪದಾರ್ಥ ರವಾನೆ ಮಾಡಲು ಚಿಂತಿಸಿದೆ. ವಾರಗಳ ಕಾಲ ಇಡಬಹುದಾದ ಆಹಾರ ಪೊಟ್ಟಣಗಳನ್ನು ತಯಾರು ಮಾಡಲಾಗುತ್ತಿದೆ. ಸಂಸ್ಥೆ ಬಳಿ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಬೇಗನೇ ಕೆಡದಂತಹ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಎಫ್‌ಟಿಆರ್‌ಐನ ಪ್ರಭಾರ ನಿರ್ದೇಶಕ ಡಾ.ಆರ್.ಸುಬ್ರಹ್ಮಣ್ಯ ಮಸಾಲೆ ಅವಲಕ್ಕಿಗೆ ಅಗತ್ಯಕ್ಕೆ ತಕ್ಕ ನೀರು ಬೆರೆಸಿ ಎರಡು-ಮೂರು ನಿಮಿಷದಲ್ಲಿ ಸೇವಿಸಬಹುದು. ಉಪ್ಪಿಟ್ಟು ಅನ್ನು ಎರಡು ಮಾದರಿಯಲ್ಲಿ ತಯಾರಿಸಲಾಗಿದೆ. ಒಂದು ಪ್ಯಾಕೇಟ್‌ನಿಂದ ನೇರ ಸೇವಿಸಬಹುದು. ಮತ್ತೊಂದು ಉಪ್ಪಿಟ್ಟು ಪ್ಯಾಕೇಟ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಸೇವಿಸಬಹುದು. ಇದರ ಜತೆಗೆ ಚಪಾತಿಗೆ ನೆಂಚಿಕೊಳ್ಳಲು ಟಮೋಟೋ ಚಟ್ನಿ ತಯಾರಿಸಲಾಗುತ್ತಿದೆ.
ಇವೆಲ್ಲಾ ಸೇರಿ ಒಟ್ಟು 50 ಸಾವಿರ ಆಹಾರ ಪೊಟ್ಟಣ ತಯಾರಿಕೆಯಲ್ಲಿ ಸಿಎಫ್‌ಟಿಆರ್‌ಐ ಸಿಬ್ಬಂದಿ ನಿರತವಾಗಿದ್ದಾರೆ. ಅಲ್ಲದೇ ಹೆಚ್ಚುವರಿಯಾಗಿ ಆಹಾರ ತಯಾರಿಸಲು ಯೋಜನೆ ರೂಪಿಸಿದೆ. ಈ ಆಹಾರಗಳನ್ನು ಹತ್ತು ದಿನಕ್ಕೂ ಹೆಚ್ಚು ಸಮಯ ಬಳಕೆ ಮಾಡಬಹುದಾಗಿದೆ ಎನ್ನುತ್ತಾರೆ.












Click it and Unblock the Notifications