ಶರತ್ ವರ್ಗಾವಣೆ ವಿಚಾರ; ಮತ್ತೆ ವಿಚಾರಣೆ ಮುಂದೂಡಿದ ಸಿಎಟಿ
ಮೈಸೂರು, ಅಕ್ಟೋಬರ್ 14: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶರತ್ ಅವರ ದಿಢೀರ್ ವರ್ಗಾವಣೆ ಕುರಿತಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಈ ಮೂಲಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮತ್ತೊಮ್ಮೆ ರಿಲೀಫ್ ಸಿಕ್ಕಿದಂತಾಗಿದೆ.
ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ನಿರ್ಗಮಿತ ಡಿಸಿ ಶರತ್ ಅವರು ಅಕ್ಟೋಬರ್ 1ರಂದು ಸಿಎಟಿ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಸಿಎಟಿ, 30 ದಿನಕ್ಕೆ ಅಧಿಕಾರಿ ಬಿ. ಶರತ್ ಅವರನ್ನು ವರ್ಗಾಯಿಸಿದ್ದೇಕೆ ಎಂದು ಪ್ರಶ್ನಿಸಿ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ನಡೆಸುವುದಾಗಿ ತಿಳಿಸಿತ್ತು.
ನಂತರ ವಿಚಾರಣೆಯನ್ನು ಅಕ್ಟೋಬರ್ 14ನೇ ತಾರೀಕಿಗೆ ಮುಂದೂಡಿತ್ತು. ಇಂದು ವಿಚಾರಣೆ ನಡೆಯಬೇಕಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ವಿಚಾರಣೆ ನಡೆಸದೆ ಅಕ್ಟೋಬರ್ 16ಕ್ಕೆ ವಿಚಾರಣೆ ಮುಂದೂಡಿದೆ.

ಕೊರೊನಾ ಹಿನ್ನೆಲೆಯಲ್ಲಿ ಇಂದು ಆನ್ ಲೈನ್ ಮೂಲಕವೇ ಸಿಎಟಿ ವಿಚಾರಣೆಯನ್ನು ಆರಂಭಿಸಿತ್ತು. ಆದರೆ ವಿಚಾರಣೆ ವೇಳೆ ತಾಂತ್ರಿಕ ಕಾರಣಗಳಿಂದ ಹೇಳಿಕೆಗಳು ಅಸ್ಪಷ್ಟವಾಗಿ ಕೇಳಿಸುತ್ತಿದ್ದವು. ಈ ಕಾರಣದಿಂದ ಮತ್ತೆ ಎರಡು ದಿನ ವಿಚಾರಣೆ ಮುಂದೂಡಿದ ಸಿಎಟಿ, ಅಂದು ವಾದಿ, ಪ್ರತಿವಾದಿಗಳ ವಕೀಲರು ನ್ಯಾಯಾಲಯದಲ್ಲಿ ಖುದ್ದು ಹಾಜರಿರುವಂತೆ ಸೂಚನೆ ನೀಡಿದೆ. ಇದರಿಂದ ರೋಹಿಣಿ ಸಿಂಧೂರಿ ಅವರಿಗೂ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.












Click it and Unblock the Notifications