ಮಡಿಕೇರಿಯಿಂದ ಬರುತ್ತಿದ್ದ ಕಾರು ಸೀದಾ ಮನೆಯೊಳಗೇ ನುಗ್ಗಿತು
ಮೈಸೂರು, ಸೆಪ್ಟೆಂಬರ್ 6 : ರಸ್ತೆ ದಾಟುವಾಗ ಹುಷಾರು, ಫುಟ್ ಪಾತ್ ಮೇಲೆ ನಡೆದಾಡುವಾಗ ಜೋಪಾನ... ಇಂಥ ಮಾತುಗಳನ್ನೆಲ್ಲ ಕೇಳಿರ್ತೀರಿ. ಈ ಸುದ್ದಿ ಓದಿದ ಮೇಲೆ ಹೊಸದಾಗಿ ಮತ್ತೊಂದು ಎಚ್ಚರಿಕೆ ಮಾತನ್ನೂ ಸೇರಿಸಿಕೊಳ್ಳ ಬೇಕಾಗಬಹುದು. ಏನದು ಸುದ್ದಿ ಅಂತೀರಾ?
ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಮನೆಯೊಳಗೇ ನುಗ್ಗಿದ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಈ ಘಟನೆ ಸಂಭವಿಸಿದೆ.
ಮಡಿಕೇರಿ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ವೀರಭದ್ರಶೆಟ್ಟಿ ಎಂಬುವವರಿಗೆ ಸೇರಿದ ಮನೆಯೊಳಗೆ ನುಗ್ಗಿದೆ. ಈ ವೇಳೆ ಮನೆಯ ಮುಂಭಾಗ ಜಖಂಗೊಂಡಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಕಾರಿನಲ್ಲಿದ್ದ ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇಪ್ಪತ್ನಾಲ್ಕು ವರ್ಷದ ಗೃಹಿಣಿ ಆತ್ಮಹತ್ಯೆ
ಮೈಸೂರು ತಾಲೂಕಿನ ಡಿ.ಕಾಟೂರು ನಿವಾಸಿ ಮಹದೇವಮ್ಮ (24) ಎಂಬುವವರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ತಾಲೂಕಿನ ಕುದೇರು ಸಮೀಪದ ಗಣಿಗನೂರು ಗ್ರಾಮದ ಮಹದೇವಮ್ಮ 2 ವರ್ಷಗಳ ಹಿಂದೆಯಷ್ಟೇ ಡಿ.ಸಾಲುಂಡಿ ನಿವಾಸಿ ಶಂಕರ ಅವರನ್ನು ವಿವಾಹವಾಗಿದ್ದರು.
ಮದುವೆ ಆದಾಗಿನಿಂದ ಪತಿಯು ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದ ಮಹದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಶಂಕರ್ ವಿರುದ್ಧ ಮಹದೇವಮ್ಮ ಅವರ ದೊಡ್ಡಪ್ಪ ದೂರು ದಾಖಲಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications