Mysuru Dasara: ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಕುಶಾಲ ತೋಪು ತಾಲೀಮು
ಸಂಭ್ರಮದ ಮೈಸೂರು ದಸರಾ ಹಬ್ಬಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದು, ಜಂಬೂ ಸವಾರಿಗೆ ಆನೆಗಳು ಸಜ್ಜಾಗುತ್ತಿವೆ. ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಕುಶಾಲತೋಪು ತಾಲೀಮು ಆರಂಭಿಸಲಾಗಿದೆ. ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಆನೆ, ಕುದುರೆಗಳಿಗೆ ಕುಶಾಲತೋಪು ಪೂರ್ವಭಾವಿ ತಾಲೀಮು ನಡೆಸಲಾಗಿದೆ.
ಅಂಬಾರಿ ಹೊರಲು ಸಜ್ಜಾಗಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ, ಲಕ್ಷ್ಮೀ, ವರಲಕ್ಷ್ಮಿ, ಏಕಲವ್ಯ, ಪ್ರಶಾಂತ, ಮಹೇಂದ್ರ, ಸುಗ್ರೀವ್, ಲಕ್ಷ್ಮೀ, ಹಿರಣ್ಯ ಆನೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು.

ಮೈಸೂರು ನಗರದ ವಸ್ತುಪ್ರದರ್ಶನ ಆವರಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಆನೆಗಳು ಮತ್ತು ಕುದುರೆಗಳಿಗೆ ಕುಶಾಲತೋಪು ಪೂರ್ವಭಾವಿ ಅಭ್ಯಾಸ ನಡೆಸಲಾಯಿತು. ಅಭ್ಯಾಸದ ಸಂದರ್ಭದಲ್ಲಿ 21 ಕುಶಾಲ ತೋಪು ಹಾರಿಸಿದ್ದು, ಆನೆಗಳು, ಕುದುರೆಗಳು ಹೆದರದೆ ತಾಲೀಮು ನಡೆಸಿದವು.
ಮೈಸೂರು ದಸರಾ ಆಚರಣೆಯ ಪ್ರಮುಖ ಆಕರ್ಷಣೆಯಾದ ಜಂಬುಸವಾರಿ ದಿನದಂದು ಅರಮನೆ ಆವರಣದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮುನ್ನ 21 ಕುಶಾಲತೋಪನ್ನು ಹಾರಿಸಲಾಗುತ್ತದೆ. ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು ಮತ್ತು ಕುದುರೆಗಳು ಈ ವೇಳೆ ಹೆದರಬಾರದು ಎಂದು ಕುಶಾಲತೋಪು ತಾಲೀಮು ನಡೆಸಲಾಗುತ್ತದೆ.
ಮೊದಲ ಸುತ್ತಿನ ಕುಶಾಲತೋಪು ಅಭ್ಯಾಸ ಮುಗಿದಿದ್ದು, ಸೆಪ್ಟೆಂಬರ್ 29 ಮತ್ತು ಅಕ್ಟೋಬರ್ 1ರಂದು ಕುಶಾಲತೋಪು ಅಭ್ಯಾಸ ನಡೆಸಲಾಗುತ್ತದೆ. ಅರಮನೆ ಆವರಣದಿಂದ ವಸ್ತು ಪ್ರದರ್ಶನ ಆವರಣಕ್ಕೆ ಬಂದ ಆನೆಗಳಿಗೆ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಸ್ವಾಗತಿಸಲಾಯಿತು.

ಕಳೆಗಟ್ಟಿದ ಯುವ ಸಂಭ್ರಮ
ದಸರಾ ಹಬ್ಬದ ಪ್ರಯುಕ್ತ ಮಾನಸಗಂಗೋತ್ರಿ ಬಯಲು ರಂಗಮಂದಿರಲ್ಲಿ ಆಯೋಜಿಸಿದ್ದ ಯುವ ಸಂಭ್ರಮ ಕಾರ್ಯಕ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಎರಡನೇ ದಿನ ಜಿಟಿ ಜಿಟಿ ಮಳೆಯ ನಡುವೆಯೂ ಪ್ರೇಕ್ಷಕರು ಕಾರ್ಯಕ್ರಮ ವೀಕ್ಷಿಸಲು ಕಿಕ್ಕಿರಿದು ಸೇರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ಕಮೋಡಳ್ಳಿ ಕಲಾ ತಂಡದವರು ನೀಡಿದ ಮಲ್ಲಗಂಬ ಪ್ರದರ್ಶನ ಮನಸೂರೆಗೊಂಡಿತು. ಮಂಡ್ಯದ ಕಿರುಗಾವಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ತಂಡದ ವತಿಯಿಂದ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ 51 ನೃತ್ಯ ಪ್ರದರ್ಶನಗಳನ್ನು ಮಾಡಲಾಯಿತ್ತು. ದಸರಾ ಅರ್ಜುನ ಆನೆ, ಜಾನಪದ ವೈವಿಧ್ಯತೆ ಪರಂಪರೆ, ಕನ್ನಡ ಸಿನಿಮಾಧಾರಿತ, ಕಾನೂನು ಮತ್ತು ಸುವ್ಯವಸ್ಥೆ, ಹುಲಿವೇಷ ಮತ್ತು ಯಕ್ಷಗಾನ, ಭಾರತೀಯ ಯೋಧರ ಪಾತ್ರ, ನವಶಕ್ತಿ, ಪರಿಸರ ಸಂರಕ್ಷಣೆ, ಸ್ವಾತಂತ್ರ ಹೋರಾಟಗಾರರು, ಸಾಂಸ್ಕೃತಿಕ ಪರಂಪರೆ, ಆಧುನಿಕ ನೃತ್ಯ ಪ್ರಕಾರಗಳು, ಕೊಡಗಿನ ಸೈನಿಕ, ಭಾರತ ಸಂವಿಧಾನ,ವಿಜಯ ನಗರ ಸಾಮ್ರಾಜ್ಯ, ವಯನಾಡು ದುರಂತ ಮುಂತಾದ ವಿಷಯಗಳ ಕುರಿತಂತೆ ನೃತ್ಯ ಪ್ರದರ್ಶನಗಳನ್ನು ನೀಡಲಾಯಿತು.












Click it and Unblock the Notifications